ನೀಟ್ ಸೇರಿದಂತೆ ಸಾರ್ವಜನಿಕ ಪರೀಕ್ಷೆಗಳಲ್ಲಿನ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮಗಳನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸೌಹಾರ್ದ ಕರ್ನಾಟಕ ಹಾಗೂ ಕರ್ನಾಟಕ ನಾಗರಿಕ ಸಮಾಜದ ಸದಸ್ಯರು ಗುರುವಾರ ನಗರದ ಜಗತ್ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು. ಪರಿಸರ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದ ಪ್ರತಿಭಟನಾಕಾರರು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಕ್ಷಣ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆ ಬಳಿಕ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಮುಖಂಡರು, ‘ನವದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಸೋನಮ್ ವಾಂಗ್ಚುಕ್ ಹಾಗೂ ವಿದ್ಯಾರ್ಥಿಗಳ ಉಪವಾಸ ಸತ್ಯಾಗ್ರಹವು ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ, ಆಡಳಿತಾತ್ಮಕ ವೈಫಲ್ಯ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ’ ಎಂದು ಹೇಳಿದರು.
‘ಉಪವಾಸ ನಿರತರ ಆರೋಗ್ಯ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಕ್ಷಣ ಸಂವಾದ ಆರಂಭಿಸಿ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು. ಪರೀಕ್ಷಾ ಅಕ್ರಮಗಳ ಕುರಿತು ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ಪರೀಕ್ಷಾ ಅಕ್ರಮಗಳಿಂದ ಸಂಕಷ್ಟಕ್ಕೊಳಗಾದ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳಿಗೆ ಪರಿಹಾರ, ಕಾನೂನು ನೆರವು ಮತ್ತು ಅಗತ್ಯ ಬೆಂಬಲ ಒದಗಿಸಬೇಕು’ ಎಂದು ಅವರು ಆಗ್ರಹಿಸಿದರು.
‘ಇದೇ ವೇಳೆ ಸಾರ್ವಜನಿಕ ಪರೀಕ್ಷೆಗಳ ಪಾರದರ್ಶಕತೆ, ಭದ್ರತೆ ಹಾಗೂ ಹೊಣೆಗಾರಿಕೆಯನ್ನು ಖಚಿತಪಡಿಸಲು ಸ್ವತಂತ್ರ ರಾಷ್ಟ್ರೀಯ ವ್ಯವಸ್ಥೆ ರೂಪಿಸಬೇಕು. ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು, ನಾಗರಿಕ ಸಮಾಜದ ಸದಸ್ಯರು ಹಾಗೂ ಪತ್ರಕರ್ತರ ವಿರುದ್ಧ ಯಾವುದೇ ಪ್ರತೀಕಾರಾತ್ಮಕ ಕ್ರಮ ಕೈಗೊಳ್ಳಬಾರದು’ ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಬರಗಾಲ ಘೋಷಿಸಿ ಎಕರೆಗೆ ₹50 ಸಾವಿರ ಪರಿಹಾರ ನೀಡುವಂತೆ ಆಗ್ರಹಿಸಿ ರೈತರ ಪ್ರತಿಭಟನೆ
ಧರಣಿಯಲ್ಲಿ ಈ ಸಂದರ್ಭದಲ್ಲಿ ಡಾ. ಮೀನಾಕ್ಷಿ ಬಾಳಿ, ಕೆ ನೀಲಾ, ಆರ್ ಕೆ ಹುಡಗಿ, ಪದ್ಮನಿ ಕಿರಣಗಿ, ಶಶಿಕಲಾ ಕಟ್ಟೆ, ರೇಣುಕಾ ಸಿಂಘೆ, ಧನರಾಜ ಕಾಂಬಳೆ, ರವಿ ಸಜ್ಜಿನ್, ಡಾ. ಅರುಣ ಜೋಳದಕೂಡ್ಲಗಿ, ಆರ್ ಜಿ ಶೆಟಗಾರ್, ಮಾರುತಿ ಗೋಖಲೆ, ಡಾ ಖೇಮಣ್ಣ ಅಲಿ, ಮೋಹನ ಕಟ್ಟಿಮನಿ, ಡಾ. ಗವಿಸಿದ್ದಪ್ಪ ಪಾಟೀಲ್, ಡಾ. ಶ್ರೀಶೈಲ ನಾಗರಾಳ, ಶಾಮ್ಯುಯಲ್, ಡಾ. ಸಿದ್ದಪ್ಪ ಹೊಸಮನಿ, ವಿಶ್ವನಾಥ, ಅಬ್ದುಲ್ ಖಾದರ್, ರಮೇಶ ಲಂಡನಕರ್, ನಾಗೇಂದ್ರ ಮಾಡ್ಯಾಳ, ಶಿವಾನಂದ ಕಾಂದೆ, ಮಲ್ಲಿಕಾರ್ಜುನ ಗೋಳಾ, ಶಾಂತಪ್ಪ ಪಾಟೀಲ್, ಲವಿತ್ರ, ಇಮಾಮ್ ಸಾಬ್, ದೇವಿಂದ್ರಮ್ಮ ಯಾದಗಿರಿ, ಹಣಮ್ಮ, ಮಹಾದೇವಿ, ಜಿ ಅರುಣಕುಮಾರ್, ಸಾಧ್ಯರಾಜ್ ಶ್ಯಾಮೂವೆಲ್





