ಐದನೇ ತರಗತಿ ಓದುತ್ತಿರುವ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಖಾಸಗಿ ಶಾಲೆಯ ಶಿಕ್ಷಕ ಹಾಜಿಮಲಂಗ ಗಿಣಿಯಾರ ಎಂಬಾತನನ್ನು ಕಲಬುರಗಿ ಜಿಲ್ಲೆಯ ಯಡ್ರಾಮಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಹಾಜಿಮಲಂಗ ಎಂಬಾತ ಶಾಲಾ ತರಗತಿಗಳು ಮುಗಿದ ಬಳಿಕ ಟ್ಯೂಷನ್ ಕ್ಲಾಸ್ ಮಾಡುವುದಾಗಿ ಕೆಲವು ಮಕ್ಕಳನ್ನು ರಾತ್ರಿ ಶಾಲೆಯಲ್ಲಿ ಉಳಿಸಿಕೊಳ್ಳುತ್ತಿದ್ದು, ಕ್ಲಾಸ್ ತೆಗೆದುಕೊಂಡು ಬೆಳಗ್ಗೆ ಅವರನ್ನು ಮನೆಗೆ ಕಳುಹಿಸುತ್ತಿದ್ದರು. ಮೇ ತಿಂಗಳಲ್ಲಿ 11 ವರ್ಷದ ಬಾಲಕಿಗೆ ರಕ್ತಸ್ರಾವವಾಗಿತ್ತು. ಮಗಳು ಋತುಮತಿ(ಮುಟ್ಟು) ಆಗಿರಬಹುದೆಂದು ಪೋಷಕರು ಸುಮ್ಮನಿದ್ದು, ಎಂದಿನಂತೆ ಶಾಲೆಗೆ ಕಳುಹಿಸಿದ್ದರು. ಅಂದಿನ ರಕ್ತಸ್ರಾವ ಅತ್ಯಾಚಾರದಿಂದಾಗಿತ್ತು ಎಂಬುದು ಅವರಿಗೆ ತಡವಾಗಿ ತಿಳಿದುಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಲಕಿಗೆ ಹೆಚ್ಚಿನ ಅಂಕದ ಆಮಿಷವೊಡ್ಡಿದ್ದ ಹಾಜಿಮಲಂಗ, ಜೀವ ಬೆದರಿಕೆ ಹಾಕಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಮನೆಯಲ್ಲಿ ಯಾರಿಗೂ ಹೇಳದಂತೆ ಬೆದರಿಕೆಯನ್ನೂ ಹಾಕಿದ್ದನೆಂದು ತಿಳಿದುಬಂದಿದೆ. ನವೆಂಬರ್ 29ರ ರಾತ್ರಿ ಬಾಲಕಿಯನ್ನು ಸಿಬ್ಬಂದಿ ಕೋಣೆಗೆ ಕರೆದೊಯ್ದು ಮತ್ತೊಮ್ಮೆ ಕೃತ್ಯ ಎಸಗಿದ್ದಾನೆ. ಬಾಲಕಿಯು ಈ ಬಗ್ಗೆ ತನ್ನ ಪರಿಚಯಸ್ಥರಿಗೆ ತಿಳಿಸಿದ ಬಳಿಕ ಪೋಷಕರಿಗೆ ಗೊತ್ತಾಗಿದೆ ಎಂದು ಮಾಹಿತಿ ನೀಡಿದರು.
ಶಿಕ್ಷಕನ ಕೃತ್ಯವನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಶಾಸಕರು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಪಟ್ಟು ಹಿಡಿದು ಕುಳಿತಿದ್ದಾರೆ. ಪ್ರತಿಭಟನೆಗೆ ಬೆಂಬಲವಾಗಿ ವಿದ್ಯಾರ್ಥಿಗಳು ಶಾಲೆ–ಕಾಲೇಜುಗಳ ತರಗತಿಗಳಿಂದ ಹೊರಗೆ ಉಳಿದಿದ್ದು, ವ್ಯಾಪಾರಸ್ಥರು ತಮ್ಮ ಅಂಗಡಿ, ಮುಂಗಟ್ಟುಗಳ ಬಾಗಿಲು ಬಂದ್ ಮಾಡಿದ್ದಾರೆ. ಬಸ್ ಸಂಚಾರವೂ ಸ್ಥಗಿತವಾಗಿದೆ.
“ಕ್ಷೇತ್ರದ ಶಾಸಕರು ಶಿಕ್ಷಣ ಸಚಿವರೊಂದಿಗೆ ಮಾತನಾಡಿ, ಮಕ್ಕಳ ರಕ್ಷಣೆಯ ಭರವಸೆ ನೀಡಬೇಕು. ಶಾಸಕರು ಬರವವರೆಗೂ ರಸ್ತೆ ಬಿಟ್ಟು ಕದಲುವುದಿಲ್ಲ. ಸ್ಥಳಕ್ಕೆ ಬರಲು ವಿಳಂಬ ಮಾಡಿದರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತೇವೆ. ಹೆಣ್ಣುಮಕ್ಕಳ ಕೈಗೆ ಕಲ್ಲುಗಳು ಬರುವ ಮೊದಲು ಅಧಿಕಾರಿಗಳು ಸ್ಥಳಕ್ಕೆ ಬರಬೇಕು” ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಪ್ರಕರಣದ ಕುರಿತು ಮಾಹಿತಿ ಪಡೆಯಲು ಈ ದಿನ.ಕಾಮ್ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಅವರನ್ನು ಸಂಪರ್ಕಿಸಿದಾಗ, ಬ್ಯುಸಿ ಇರುವುದಾಗಿ ತಿಳಿಸಿದ ಅವರು ಯಾವುದೇ ಮಾಹಿತಿ ನೀಡದೆ ಕರೆ ಕಡಿತಗೊಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಶಾಸಕ ಸ್ಥಾನದಿಂದ ಯತ್ನಾಳ ವಜಾಕ್ಕೆ ಬಸವಪರ ಸಂಘಟನೆಗಳ ಆಗ್ರಹ
ಪ್ರತಿಭಟನೆಯಲ್ಲಿ ಶ್ರೀರಾಮಸೇನೆ ರಾಜ್ಯ ಘಟಕದ ಅಧ್ಯಕ್ಷ, ಆಂದೋಲಾ ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ, ಬಿಜೆಪಿ ಮುಖಂಡ ಮಣಿಕಂಠ ರಾಠೋಡ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಜಿ ಪಾಟೀಲ ಸೇರಿದಂತೆ ಬಹುತೇಕರು ಇದ್ದರು.
ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ, ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿರುವುದಾಗಿ ತಿಳಿದುಬಂದಿದೆ.