ಪಡಿತರ ಅನ್ನಭಾಗ್ಯ ಯೋಜನೆ ಜಾರಿ ಮಾಡಿರುವ ಬೆನ್ನಲ್ಲೇ ಹಮಾಲಿ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿರುವ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಬೇಕು. ಹಮಾಲಿ ಕಾರ್ಮಿಕರನ್ನು ಮರು ನೇಮಕ ಮಾಡಿಕೊಳ್ಳಬೇಕು. ಈ ಸಂಬಂಧ ತುರ್ತು ಜಂಟಿ ಸಭೆ ಕರೆಯಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕಾರ್ಮಿಕರ ಒಕ್ಕೂಟ ಮತ್ತು ಕರ್ನಾಟಕ ಶ್ರಮಿಕ ಶಕ್ತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಮತ್ತು ಕಾರ್ಮಿಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ಉಪ ನಿರ್ದೇಶಕರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಜಿಲ್ಲೆಯ ಅಫಜಲ್‌ಪುರ ತಾಲೂಕಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ(ಕೆಎಫ್‌ಸಿಎಸ್‌ಸಿ) ಗೋದಾಮಿನಲ್ಲಿ ಹತ್ತಾರು ವರ್ಷಗಳಿಂದ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸ ಮಾಡುತ್ತಿರುವ ಹಮಾಲಿ ಕಾರ್ಮಿಕರನ್ನು ಗ್ರಾಮಾಂತರ ಸಾಗಾಣಿಕೆ ಗುತ್ತಿಗೆದಾರ ಅಶೋಕ ಟ್ರಾನ್ಸ್‌ಪೋರ್ಟ್ ಕಂಪನಿ ಏಕಾಏಕಿ ತೆಗೆದುಹಾಕಿದೆ” ಎಂದು ಆರೋಪಿಸಿದರು.
“ಹಮಾಲಿ ಕಾರ್ಮಿಕರನ್ನು ಏಕಾಏಕಿ ತೆಗೆದಿರುವುದು ಕಾರ್ಮಿಕ ಕಾನೂನುನಿಗೆ ವಿರುದ್ಧ ಮತ್ತು ಸಂವಿಧಾನ ವಿರೋಧಿಯಾಗಿದೆ. ಹಾಗಾಗಿ ತಾವು ಮಧ್ಯಪ್ರವೇಶ ಮಾಡಿ ಕೆಎಫ್‌ಸಿಎಸ್‌ಸಿಯಲ್ಲಿ ಈಗಾಗಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರೇ ಕೆಲಸ ನಿರ್ವಹಣೆ ಮಾಡುವಂತೆ ನಿರ್ದೇಶನ ನೀಡಬೇಕು” ಎಂದು ಒತ್ತಾಯಿಸಿದರು.
“ಹಮಾಲಿ ಕಾರ್ಮಿಕರ ಕುಂದು ಕೊರತೆ, ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಧಿಕಾರಿ ಕಚೇರಿಗೆ ಹಲವು ಬಾರಿ ಮನವಿ ನೀಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಆಹಾರ ಇಲಾಖೆಯ ಆಯುಕ್ತರು ಮತ್ತೊಮ್ಮೆ ಸುತ್ತೋಲೆ ಕಳಿಸಿದ್ದು, ತಮ್ಮ ಕಚೇರಿಗೂ ತಲುಪಿರುತ್ತದೆ. ಈ ಹಿನ್ನೆಲೆಯಲ್ಲಿ ತಾವು ಜಿಲ್ಲಾಮಟ್ಟದ ಕಾರ್ಮಿಕ ಅಧಿಕಾರಿಗಳು, ಇಎಸ್‌ಐ, ಪಿಎಫ್ ಜಾರಿ ಅಧಿಕಾರಿಗಳು ಮತ್ತು ಸಾಗಾಣಿಕೆ ಗುತ್ತಿಗೆದಾರರನ್ನು ಒಳಗೊಂಡಂತೆ ಜಿಲ್ಲಾಧಿಕಾರಿಯವರೊಂದಿಗೆ ಜೂನ್ 29 ರಂದು ತುರ್ತು ಜಂಟಿ ಸಭೆ ಕರೆಯಬೇಕು” ಎಂದು ಕೆಎಫ್‌ಸಿಎಸ್‌ಸಿ ಜಂಟಿ ಉಪ ನಿರ್ದೇಶಕರಿಗೆ ಮನವಿ ಮಾಡಿದರು.
“ಸಾಗಣಿಕೆ ಗುತ್ತಿಗೆದಾರರು ಸಮಪರ್ಕವಾಗಿ ಗುತ್ತಿಗೆ ಕಾರ್ಮಿಕ ಕಾನೂನುಗಳನ್ನು ಸರಿಯಾಗಿ ಜಾರಿ ಮಾಡಿಲ್ಲ. ಗುತ್ತಿಗೆದಾರರು ಸಾಗಾಣಿಕೆ ಮಾಡುವ ಆಹಾರ ಧಾನ್ಯಗಳ ಪ್ರಮಾಣಕ್ಕೆ ಅನುಗುಣವಾಗಿ ಸರಿಯಾಗಿ ಇಎಸ್‌ಐ, ಪಿಎಫ್‌ಗಳನ್ನೂ ಸಮರ್ಪಕವಾಗಿ ಜಾರಿ ಮಾಡಿಲ್ಲವೆಂದು ಹಲವು ಬಾರಿ ತಮಗೂ, ಜಿಲ್ಲಾಧಿಕಾರಿ ಕಚೇರಿಗೂ ಮನವಿ ಮಾಡಿದ್ದೇವೆ” ಎಂದು ಹೇಳಿದರು.
“ಅಫಜಲ್‌ಪುರ ಸಾಗಾಣಿಕೆ ಗುತ್ತಿಗೆದಾರರು, ʼನಿರ್ದಿಷ್ಟ ಕೂಲಿ ದರಕ್ಕಿಂತ ಕಡಿಮೆ ದರಕ್ಕೆ ಕೆಲಸ ಮಾಡಿ ಇಲ್ಲವಾದರೆ ಬೇಡʼವೆಂದು ಒತ್ತಾಯಪೂರ್ವಕವಾಗಿ ಕೆಲಸದಿಂದ ತೆಗೆದಿದ್ದಾರೆ. ಇದು ಗುತ್ತಿಗೆ ಕಾರ್ಮಿಕ ಕಾಯ್ದೆಗೆ ವಿರುದ್ಧವಾಗಿದೆ. ಹಾಗಾಗಿ ಅವರ ಮೇಲೆ ಶೀಘ್ರವಾಗಿ ಕ್ರಮ ಕೈಗೊಂಡು ಕಾರ್ಮಿಕರು ಕೆಲಸ ನಿರ್ವಹಿಸಿಕೊಂಡು ಹೋಗಲು ಅನುವು ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ವಿದ್ಯಾರ್ಥಿನಿಯರ ಜೊತೆ ವಾರ್ಡನ್ ಅನುಚಿತ ವರ್ತನೆ; ಆರೋಪ
“ಹಮಾಲಿ ಕಾರಮಿಕರು ಕೆಲಸ ಮಾಡಲು ಅನುಕೂಲ ಮಾಡಿಕೊಡದಿದ್ದಲ್ಲಿ ಕೆಸಲವನ್ನು ನಿಲ್ಲಿಸಿ ತಮ್ಮ ಕಚೇರಿಯ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಬೇಕಾಗುತ್ತದೆ. ಹಾಗಾಗಿ ಕೂಡಲೇ ಈ ಮೇಲ್ಕಂಡ ದಿನಾಂಕದಲ್ಲಿ ಜಂಟಿ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉದಯಕುಮಾರ್ ಹಳಿಮನಿ, ರಮೇಶ್ ಅಫಜಲಪುರ, ಅಡ್ಯಾಪ್ಪ ಚಿಂಚೋಳಿ, ಶಿವು ಆಳಂದ, ಸೈಬಣ್ಣ ಸೇಡಂ, ಸುಭಾಷ್ ಚಿತ್ತಾಪುರ, ರಾಜೇಂದ್ರ ರಾಜವಾಳ, ಅಶ್ವಿನಿ ಮದನಕರ್, ಭವಾನಿ ಪ್ರಸಾದ್ ಸೇರಿದಂತೆ ಇತರರು ಇದ್ದರು.