ಕಲಬುರಗಿ | ಜುಲೈ 10ರಂದು ಬೆಂಗಳೂರಿನಲ್ಲಿ ಹಮಾಲಿ ಕಾರ್ಮಿಕರ ಸಮಾವೇಶ

Date:

Advertisements

ಕರ್ನಾಟಕದಲ್ಲಿ ಹಲವು ದಶಕಗಳಿಂದ ಪಡಿತರ ವಿತರಣಾ ವ್ಯವಸ್ಥೆ ಜಾರಿಯಲ್ಲಿದೆ. ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಾ ಬಂದಿದ್ದು, ಅನ್ನಭಾಗ್ಯ ಯೋಜನೆ ಜಾರಿಯಾಗಿ 10 ವರ್ಷವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜುಲೈ 10ಕ್ಕೆ ಬೆಂಗಳೂರಿನಲ್ಲಿ ಲೋಡಿಂಗ್‌ ಮತ್ತು ಅನ್‌ಲೋಡಿಂಗ್‌ ಕಾರ್ಮಿಕರ ದಶಮಾನೋತ್ಸವ ಸಮಾವೇಶವನ್ನು ಆಯೋಜಿಸಲಾಗಿದೆ.

ಕರ್ನಾಟಕ ಶ್ರಮಿಕ ಶಕ್ತಿ, ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕಾರ್ಮಿಕರ ಒಕ್ಕೂಟದ ಕಾರ್ಯಕರ್ತರು ಕಲಬುರಗಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

“ಸಿದ್ಧರಾಮಯ್ಯನವರ ನೇತೃತ್ವದ 2013ರ ಕರ್ನಾಟಕ ಸರ್ಕಾರ ಅನ್ನಭಾಗ್ಯ ಯೋಜನೆಯೆಂದು ಹೆಸರಿಟ್ಟು ಒಂದು ಸಮಗ್ರ ನೀತಿ ಜಾರಿ ಮಾಡಿದ್ದು, ಬಡವರ ಬದುಕಿಗೆ ಬಹುದೊಡ್ಡ ಆಸರೆಯಾಗಿತ್ತು. ಇದೇ ಜುಲೈ 10ಕ್ಕೆ ಈ ಅನ್ನಭಾಗ್ಯ ಯೋಜನೆಗೆ 10 ವರ್ಷವಾಗುತ್ತಿದೆ. ಆದರೆ, ಈ ಯೋಜನೆಯ ಯಶಸ್ಸಿಗೆ ಕಾರಣಕರ್ತರಾಗಿರುವ ಲೋಡಿಂಗ್ ಕಾರ್ಮಿಕರು ಈ ಯೋಜನೆಯ ಯಶಸ್ಸಿಗೆ ಎಲೆಮರೆಯ ಕಾಯಿಯಂತೆ ಹಗಲಿರುಳು ದುಡಿದಿದ್ದಾರೆ” ಎಂದರು.

Advertisements

“ಕೆಲವರು ಇದೇ ಕೆಲಸದಲ್ಲಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಈ ಕಾರ್ಮಿಕರ ಬವಣೆಯನ್ನು ಆಳುವವರಾಗಲೀ, ಮಾಧ್ಯಮದವರಾಗಲೀ, ಸಮಾಜವಾಗಲೀ ಕೇಳಿಸಿಕೊಂಡಿದ್ದು ಕಡಿಮೆ. ನಮ್ಮ ದನಿಯನ್ನು ಕೇಳಿಸಲಿಕ್ಕಾಗಿಯೇ ಜುಲೈ 10ಕ್ಕೆ ದಶಮಾನೋತ್ಸವ ಸಮಾವೇಶವನ್ನು ಆಯೋಜಿಸಲಾಗುತ್ತಿದೆ” ಎಂದು ತಿಳಿಸಿದರು.

“ಲೋಡಿಂಗ್‌ ಕಾರ್ಮಿಕರಿಗೆ ನಿರ್ದಿಷ್ಟ ಪ್ರಮಾಣದ ಕೂಲಿ ಕೆಲಸದ ಭದ್ರತೆ ಇಲ್ಲವಾಗಿದೆ. ಹಮಾಲಿ ಕಾರ್ಮಿಕರ ಕೆಲಸದ ಭದ್ರತೆ ಬಗ್ಗೆ ಒತ್ತಾಯ ಮಾಡಲಾಗುವುದು ಮತ್ತು ಅಂದು ನಮ್ಮ ಹಕ್ಕೊತ್ತಾಯಗಳನ್ನು ಸರ್ಕಾರಕ್ಕೆ ಮಂಡಿಸಲಾಗುವುದು. ರಾಜ್ಯದ ನಾನಾ ಮೂಲೆಗಳಿಂದ ಕಾರ್ಮಿಕ ಬಂಧುಗಳು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸಮಾವೇಶಕ್ಕೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಥವಾ ಅವರ ಪರವಾಗಿ ಹಿರಿಯ ಮಂತ್ರಿಗಳು ಬಂದು ನಮ್ಮ ಹಕ್ಕೊತ್ತಾಯಗಳನ್ನು ಸ್ವೀಕರಿಸಲಿದ್ದಾರೆ” ಎಂದು ಹೇಳಿದರು.

ಶ್ರಮಿಕ ಕಾರ್ಮಿಕರ ಸಂಬಳ ಭದ್ರತೆಗಾಗಿ ಮಹಾರಾಷ್ಟ್ರದಲ್ಲಿ 1969 ರಲ್ಲೇ ಕಲ್ಯಾಣ ಮಂಡಳಿ ರಚನೆ ಮಾಡಿದೆ. ಅಂತೆಯೇ ಅನ್ನಭಾಗ್ಯ ಯೋಜನೆಗೆ ಪೂರಕವಾಗಿ ರಾಜ್ಯ ಉಗ್ರಾಣ ನಿಗಮ , ರೈಲ್ವೆ ಗೂಡ್ಸ್ ಶೆಡ್,‌ ಎಪಿಎಂಸಿಗಳಲ್ಲಿ ಹಾಗೂ ವರ್ತಕರ ಅಂಗಡಿಗಳಲ್ಲಿ ಪೇಟೆ ಬೀದಿಗಳಲ್ಲಿ ಹತ್ತಾರು ಲಕ್ಷ ಹಮಾಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಳ ಭದ್ರತೆಗಾಗಿ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಬೇಕು” ಎಂದು ಒತ್ತಾಯಿಸಿದರು.

“ಅನ್ನಭಾಗ್ಯ ಯೋಜನೆಯಡಿ ಕೆಲಸ ಮಾಡುವ ಹಮಾಲಿ ಕಾರ್ಮಿಕರಿಗೆ ಯಾವುದೇ ಸರ್ಕಾರಿ ಅಧಿಕಾರಿ, ಗುತ್ತಿಗೆದಾರ ಕಿರುಕುಳ ನೀಡಿ ಕೆಲಸದಿಂದ ಕಿತ್ತು ಹಾಕದಂತೆ ಭದ್ರತೆ ನೀಡಬೇಕು. ಕಾರ್ಮಿಕ ವಿರೋಧಿಯಾಗಿದ್ದ ಹಿಂದಿನ ಸರ್ಕಾರ 8 ಗಂಟೆಗಳ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸಿದ ಆದೇಶವನ್ನು ಕೂಡಲೇ ಹಿಂಪಡೆಯಬೇಕು” ಎಂದು ಆಗ್ರಹಿಸಿದರು.

“ಹಮಾಲಿ ಕಾರ್ಮಿಕರ ಕೆಲಸದ ಭದ್ರತೆ ಮತ್ತು ಸಂಬಳ ಭದ್ರತೆಗಾಗಿ ಮಹಾರಾಷ್ಟ್ರ ಮಾದರಿಯಲ್ಲಿ ಹಮಾಲಿ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಬೇಕು. ಅನ್ನಭಾಗ್ಯ ಜಾರಿ ಮಾಡುವ ಹಮಾಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ನಿಯಮಾನುಗುಣವಾಗಿ ಪ್ರತಿವರ್ಷ ಕೂಲಿ ದರ ಹೆಚ್ಚಿಸಲು ಸಮಗ್ರ ನಿಯಮ ರೂಪಿಸಬೇಕು” ಎಂದರು.

“ಸಮಾನ ಕೆಲಸಕ್ಕೆ ಸಮಾನ ವೇತನ ನೀತಿಯನ್ನು ಜಾರಿಗೆ ತರಬೇಕು. ಎಲ್ಲ ಗುತ್ತಿಗೆ, ಅಸಂಘಟಿತ ಹಾಗೂ ಅಭದ್ರತೆ ಇರುವ ಕಾರ್ಮಿಕರಿಗೂ ಕನಿಷ್ಠ 30 ಸಾವಿರ ವೇತನ ಹಾಗೂ ಉದ್ಯೋಗ ಭದ್ರತೆಯನ್ನು ಖಾತ್ರಿಗೊಳಿಸಿ ನೀತಿ ರೂಪಿಸಬೇಕು. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ನಗದು ಹಣ ನೀಡುವುದನ್ನು ನಿಲ್ಲಿಸಿ ಆಹಾರ ಧಾನ್ಯಗಳನ್ನೇ ನೀಡಬೇಕು. ಅನ್ನಭಾಗ್ಯ ಹಮಾಲಿ ಕಾರ್ಮಿಕರಿಗೆ ಆಹಾರ ನಿಗಮದ ಮೂಲಕ ಸರ್ಕಾರವೇ ನೇರ ಸಂಬಳ ಪಾವತಿ ಮಾಡಲು ಮುಂದಾಗಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬರಪಡಿತ ಪ್ರದೇಶವೆಂದು ಘೋಷಿಸಿ, ಬರ ಕಾಮಗಾರಿ ಆರಂಭಿಸುವಂತೆ ಒತ್ತಾಯ

ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಹಾರ ಸಚಿವ ಕೆ ಎಚ್ ಮುನಿಯಪ್ಪ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಸೇರಿದಂತೆ ಸರ್ಕಾರದ ಪ್ರತಿನಿಧಿಗಳು ಭಾಗವಹಿಸಲಿದ್ದು, ಹಿರಿಯ ಕಾರ್ಮಿಕ ಮುಖಂಡರು ಹಾಗೂ ಹಿರಿಯ ಹೈಕೋರ್ಟ್ ವಕೀಲ ಎಸ್ ಬಾಲನ್, ಸಾಮಾಜಿಕ ಕಾರ್ಯಕರ್ತ ಡಾ ಎಚ್ ವಿ ವಾಸು ಹಾಗೂ ಹಲವು ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರುಗಳಾದ ಉದಯ್ ಕುಮಾರ್, ರಾಜೇಂದ್ರ ರಾಜವಾಳ, ರಮೇಶ್, ಅಡೆಪ್ಪ, ಬಿ ಎಮ್ ರಾವ್ ಇದ್ದರು.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X