ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ರೈತ, ದಲಿತ, ಕನ್ನಡ, ವಿದ್ಯಾರ್ಥಿ, ಮಹಿಳಾ ಹಾಗೂ ಕಾರ್ಮಿಕ ಪರ ಸಂಘಟನೆಗಳು ಗಾಂಧಿಜೀ ಜಯಂತಿ ಅಂಗವಾಗಿ ಗುರುವಾರ ಕಲಬುರಗಿ ನಗರದ ಟೌನ್ ಹಾಲ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರುಗಡೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು.
ಧರಣಿಯನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೇಟ್ಟಿ ಮಾತನಾಡಿ, ಅತಿವೃಷ್ಟಿ ಮಳೆಯಿಂದ ಉಂಟಾದ ಅಪಾರ ನಷ್ಟ, ಮುಳುಗಡೆ ಪ್ರದೇಶಗಳ ಸಮಸ್ಯೆ ಹಾಗೂ ರೈತರ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಕ್ರಮಕೈಗೊಂಡು ಪರಿಹಾರ ನೀಡುವಂತೆ ಒತ್ತಾಯಿಸಿದರು.
ಜಿಲ್ಲೆಯ ಆರ್ಥಿಕತೆ ಬಹುಮಟ್ಟಿಗೆ ತೊಗರಿ ಬೆಳೆ ಮೇಲೆ ಅವಲಂಬಿತವಾಗಿದೆ. ಈ ವರ್ಷ ಮುಂಗಾರು ಬಿತ್ತನೆ ವೇಳೆ ರೈತರು ಭಾರಿ ಹೂಡಿಕೆ ಮಾಡಿ, ತೊಗರಿ 5.95 ಲಕ್ಷ ಹೆಕ್ಟೇರ್, ಹೆಸರು 50,121 ಹೆಕ್ಟೇರ್, ಉದ್ದು 30,890 ಹೆಕ್ಟೇರ್, ಸೋಯಾಬಿನ್ 23,440 ಹೆಕ್ಟೇರ್ ಮತ್ತು ಹತ್ತಿ 98,550 ಹೆಕ್ಟೇರ್ ಬೆಳೆದಿದ್ದರು. ಆರಂಭದಲ್ಲಿ ಉತ್ತಮ ಬೆಳೆಯ ನಿರೀಕ್ಷೆಯಿದ್ದರೂ, ನಂತರ ಅತಿವೃಷ್ಟಿಯಿಂದ ಈಗಾಗಲೇ ಸಾವಿರಾರು ಎಕರೆಗಳು ಹಾನಿಗೊಂಡಿವೆ. ಹಳ್ಳ, ಕೊಳ್ಳ, ನಾಲಾಗಳು ತುಂಬಿ ಹರಿಯುವುದರಿಂದ ಹಲವಾರು ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿವೆ. ಬೆಳೆಗಳ ಬೇರು ಕೊಳೆತು ಹಾಳಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸಾಲದ ಒತ್ತಡ ತಾಳಲಾರದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಕಲಬುರಗಿ | ಅಶೋಕ ವಿಜಯದಶಮಿ ಅಂಗವಾಗಿ ಪಂಚಶೀಲ ಧ್ವಜಾರೋಹಣ
ಸರ್ಕಾರಗಳು ಕೇವಲ ಸಮೀಕ್ಷೆ ನಡೆಸುವುದರಲ್ಲೇ ಕಾಲಹರಣ ಮಾಡುತ್ತಿವೆ. ಕೇಂದ್ರ ಮತ್ತು ರಾಜ್ಯದ ಸಚಿವರು, ಅಧಿಕಾರಿಗಳು ತೊಗರಿ ನಾಡಿಗೆ ಬಂದು ರೈತರ ಸಂಕಷ್ಟವನ್ನು ಆಲಿಸಿ ಶೀಘ್ರವಾಗಿ ಪರಿಹಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಧರಣಿ ಸತ್ಯಾಗ್ರಹದಲ್ಲಿ ರೈತರ ಜತೆಗೆ ವಿದ್ಯಾರ್ಥಿ, ಮಹಿಳಾ ಹಾಗೂ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾಗಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿ ಅಕ್ಟೋಬರ್ 13ರಂದು ಕಲಬುರಗಿ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಪ್ರಮುಖ ಬೇಡಿಕೆಗಳು
ಕಲಬುರಗಿ ಜಿಲ್ಲೆಯನ್ನು ಹಸಿ ಬರಗಾಲ ಪ್ರದೇಶವೆಂದು ಘೋಷಿಸಬೇಕು. ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಜಿಲ್ಲೆಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಬಿಡುಗಡೆ ಮಾಡಬೇಕು. ತೊಗರಿ ನಾಡಿಗೆ ರೂ.1000 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಮಳೆಯಿಂದ ಹಾನಿಯಾದ ರೈತರಿಗೆ ತಕ್ಷಣ ಬೆಳೆ ವಿಮೆ ಜಾರಿಗೆ ತರುವುದು. ಗಂಡೂರಿ ನಾಲಾ ಆಣೆಕಟ್ಟು, ಬೆಣ್ಣೆ ತೊರಾ ಡ್ಯಾಮ್, ಚಂದ್ರಂಪಳ್ಳಿ ಡ್ಯಾಮ್ ಹಾಗೂ ಭೀಮಾ ನದಿಯಿಂದ ಉಂಟಾಗುವ ಮುಳುಗಡೆ ಪ್ರದೇಶಗಳಿಗೆ ಶಾಶ್ವತ ಪರಿಹಾರ ನಿರ್ಮಾಣ. ಜಿಲ್ಲೆಯಾದ್ಯಂತ ಮಳೆಯಿಂದ ಹಾನಿಯಾದ ರಸ್ತೆಗಳು, ಸೇತುವೆಗಳು, ಮನೆಗಳು, ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳು ಇತ್ಯಾದಿಗಳ ಮರುನಿರ್ಮಾಣ. ಮಳೆಯಿಂದ ಹಾನಿಗೊಳಗಾದ ರೈತರ ಜಮೀನುಗಳನ್ನು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (NREGA) ಅಡಿ ಅಭಿವೃದ್ಧಿಪಡಿಸುವುದು ಸೇರಿದಂತೆ ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಆಗ್ರಹಿಸಿದೆ.
ಇದನ್ನೂ ಓದಿ: ಕಲಬುರಗಿ ರೈತರಿಗೆ ₹1417.02 ಕೋಟಿ ಪರಿಹಾರ, ಬಿಜೆಪಿಯಿಂದ ನಕಲಿ ಪ್ರತಿಭಟನೆ: ಪ್ರಿಯಾಂಕ್ ಖರ್ಗೆ
ಈ ಸಂದರ್ಭದಲ್ಲಿ ಪದ್ಮಿನಿ ಸಿಪಿಐಎಂ, ಆದಿನಾಥ ರೈತ ಮುಖಂಡ, ದಲಿತ ಮುಖಂಡ ಬಸಣ್ಣ ಸಿಂಗೆ, ಮೌಲಮುಲ್ಲಾ, ದಯಾನಂದ ಪಾಟೀಲ್ ಸೇರಿದಂತೆ ಅನೇಕರಿಂದರು.
