ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯಲ್ಲಿ ಎರಡನೇ ತಂಡದ ತರಬೇತಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಲಬುರಗಿಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯಲ್ಲಿ ಮಕ್ಕಳಿಗೆ ಅಗತ್ಯವಿರುವ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸಲಾಗುವುದು. ಇಲ್ಲಿ ಪ್ರಸ್ತುತ 100 ಸಂಖ್ಯೆ ಮಕ್ಕಳಿಗೆ ತರಬೇತಿ ನೀಡುವ ಸಾಮರ್ಥ್ಯ ಇದ್ದು, ಇದನ್ನು ಅಗತ್ಯವಿದ್ದಲ್ಲಿ 500 ಸಂಖ್ಯೆಗೆ ಹೆಚ್ಚಿಸಲು ಪ್ರಸ್ತಾವನೆ ನೀಡುವಂತೆ ಹಾಗೂ ನಮ್ಮ ಭಾಗದ ಮಕ್ಕಳು ದೇಶ ಸೇವೆಗೈಯುವ ಸೈನಿಕರಾಗಿ ಆಯ್ಕೆಯಾಗಲು ಸಮರ್ಪಕ ರೀತಿಯಲ್ಲಿ ತರಬೇತಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
‘ಭಾರತವು ಇಂದು ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗುವತ್ತ ದಾಪುಗಾಲು ಇಟ್ಟಿದೆ. ಇದಕ್ಕೆ ಪ್ರಜಾಪ್ರಭುತ್ವದ ವ್ಯವಸ್ಥೆ ಕಾರಣವಾಗಿದ್ದು, ಪ್ರಜಾಪ್ರಭುತ್ವ ಉಳಿವಿನಲ್ಲಿ ಸೇನೆ ಪಾತ್ರ ಅಗಾಧ. ದೇಶ ಸೇವೆಗಾಗಿ ನೀವೆಲ್ಲರೂ ಮನೆ-ಕುಟುಂಬಗಳನ್ನು ಬಿಟ್ಟು ಬಂದಿದ್ದೀರಿ. ಕಠಿಣ ಸೇವೆಯ ತರಬೇತಿಗೆ ನೀವೆಲ್ಲ ಅಣಿಯಾಗಿರುವುದು ಸಂತೋಷ ಉಂಟುಮಾಡಿದೆ. ಕಾಲೇಜು ಮಟ್ಟದಲ್ಲಿ ಯುವಜನತೆಗೆ ಶಿಸ್ತಿನ ಅಭ್ಯಾಸ ಅತ್ಯಗತ್ಯವಾಗಿದೆ’ ಎಂದು ತಿಳಿಸಿದರು.
ಈ ವೇಳೆ ಮಕ್ಕಳು ಅವರು ಪಡೆದ ತರಬೇತಿಯ ಪ್ರದರ್ಶನ ಮಾಡಿದರು. ಭಯೋತ್ಪಾದಕರು ದೇಶಕ್ಕೆ ನುಗ್ಗಿ ಬಂಕರ್‌ನಲ್ಲಿ ಅಡಗಿಕೊಂಡಾಗ ಅವರನ್ನು ಹೊಡೆದು ಬಂಕರ್ ಸರ್ವನಾಶ ಮಾಡುವ ಬಂಕರ್ ಡ್ರಿಲ್ ಪ್ರದರ್ಶನ ಗಮನ ಸೆಳೆಯಿತು.

‘ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನಾಲ್ಕು ತಿಂಗಳ ಅವಧಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ದೈಹಿಕ ಸಹಿಷ್ಣುತೆ ಹಾಗೂ ಲಿಖಿತ ಪರೀಕ್ಷೆಗೆ ಸಂಬಂಧಿಸಿದ ತರಬೇತಿಯನ್ನೂ ನೀಡಲಾಗುವುದು. ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅಗತ್ಯವಿರುವ ಟ್ರ್ಯಾಕ್ ಸೂಟ್, ಸಮವಸ್ತ್ರ ಹಾಗೂ ಶೂಗಳನ್ನು ಉಚಿತವಾಗಿ ವಿತರಿಸಲಾಗುತ್ತದೆʼ ಎಂದು ಹೇಳಿದರು.
‘ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ ವಿಜ್ಞಾನ, ಗಣಿತ ಹಾಗೂ ಸಾಮಾನ್ಯ ಜ್ಞಾನದ ವಿಷಯಗಳ ತರಬೇತಿಯನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾಗುತ್ತದೆ. ತರಬೇತಿ ಪಡೆದ ನಂತರ ಅಭ್ಯರ್ಥಿಗಳು 21 ವರ್ಷಗಳ ವಯಸ್ಸಿನವರೆಗೆ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ಸೇವೆಗಳಿಗೆ ಸೇರಲು ಅನುಕೂಲವಾಗುತ್ತದೆ. 23ನೇ ವಯಸ್ಸಿನವರೆಗೆ ಅರೆ ಸೇನಾ ಸೇವೆಗಳಾದ BSF, CISF, CRPF, SSB, ITBP, AR, NIA, SSF ಪಡೆಗಳಿಗೆ ಸೇರಲು ಅವಕಾಶವಿದೆ. 23 ರಿಂದ 28 ವರ್ಷದವರೆಗೆ ಪೊಲೀಸ್ ಮತ್ತು ಪಿಎಸ್‌ಐ ತರಬೇತಿ ಪಡೆಯಬಹುದಾಗಿದೆ’ ಎಂದು ತಿಳಿಸಿದರು.
‘ದೇಶ ಹಾಗೂ ನಾಡಿನ ರಕ್ಷಣೆಗೆ ಸೇರಬಯಸುವ ಕಲ್ಯಾಣ ಕರ್ನಾಟಕ ಭಾಗದ ಆಕಾಂಕ್ಷಿಗಳಿಗೆ ನಮ್ಮ ಸರ್ಕಾರದ ಈ ಯೋಜನೆಯು ಅತ್ಯುತ್ತಮವಾಗಿದೆ’ ಎಂದು ಹೇಳಿದರು.
ಇದನ್ನೂ ಓದಿ : ಅಪ್ರಾಪ್ತ ಮಗಳನ್ನೇ ಅತ್ಯಾಚಾರಿಗಳಿಗೆ ಒಪ್ಪಿಸಿದ್ದ ಬಿಜೆಪಿ ಮುಖಂಡೆ! ʼಶಿಸ್ತಿನ ಪಕ್ಷʼದಲ್ಲಿ ಹೀಗೇಕೆ?
ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಐಎಎಸ್ ಅಧಿಕಾರಿ ಭನ್ವರ್ ಸಿಂಗ್ ಮೀನಾ, ಐಪಿಎಸ್ ಅಧಿಕಾರಿ ಡಾ. ಶರಣಪ್ಪ ಎಸ್.ಡಿ, ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.