ಕಲಬುರಗಿ ಜಿಲ್ಲೆಯ ಸೇಡಂನ ಮಳಖೇಡದ ಸೇತುವೆ ಕಾಮಗಾರಿ ಕಳೆದ ಏಳೆಂಟು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ. ರಾಜ್ಯ ಹೆದ್ದಾರಿಯಲ್ಲಿರುವ ಈ ಸೇತುವೆಯು ಪ್ರಮುಖ ನಗರಗಳಿಗೆ ಸಂಪರ್ಕ ಬೆಸೆಯುತ್ತಿದ್ದು, ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಆಗ್ರಹಿಸಿದ್ದಾರೆ.
ಮಳಖೇಡ ಸೆತುವೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದ ಅವರು, “ಸೇಡಂನಿಂದ ಕಲಬುರಗಿ ಹಾಗೂ ಕಲಬುರಗಿಯಿಂದ ಹೈದ್ರಬಾದ್‌ಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ರಸ್ತೆ ಈ ಸೇತುವೆ ಮೂಲಕ ಹಾದುಹೋಗಿದ್ದು, ಕಾಮಗಾರಿ ಪೂರ್ಣಗೊಳ್ಳದೆ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ” ಎಂದು ಹೇಳಿದ್ದಾರೆ.
“ಮಳೆ ಬಂದಾಗ ಹಳೇ ಸೆತುವೆ ಸಂಪೂರ್ಣ ಮುಳುಗಡೆ ಆಗುತ್ತಿದ್ದು, ರಸ್ತೆ ಸಂಚಾರ ಸಂಪೂರ್ಣ ಸ್ಥಗೀತವಾಗುತ್ತಿದೆ. ಇದರಿಂದ ಜನರಿಗೆ ತುಂಬಾ ತೊಂದರೆ ಆಗುತ್ತಿದೆ. ಮಾಜಿ ಶಾಸಕರು ಹಾಗೂ ಈಗಿನ ಸಚಿವರ ಇಚ್ಛಾಶಕ್ತಿ ಕೊರತೆಯಿಂದಾಗಿ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನೂ 20% ಕಾಮಗಾರಿ ಬಾಕಿ ಇದೆ. ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಈ ವೇಳೆಗೆ ಕಾಮಗಾರಿ ಪೂರ್ಣಗೊಳಿಸಬಹುದಾಗಿತ್ತು. ಆದರೆ, ಎಲ್ಲರೂ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ” ಎಂದು ಆರೋಪಿಸಿದರು.
ಕಾಮಗಾರಿ ವೀಕ್ಷಣೆ ವೇಳೇ, ಜೆಡಿಎಸ್ ಮುಖಂಡ ಮಸ್ತಾನ ಮಳಖೇಡ, ದೇವಪ್ಪಾ, ಜಾವೀದ, ಮೌಲನಾಸಾಬ್ ಉಪಸ್ಥಿತರಿದ್ದರು.