ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿ ಮಾಹಿತಿ ಕೋರಿದ್ದ ಪತ್ರಕರ್ತನಿಗೆ ಬೆದರಿಕೆ ಹಾಕಿ ಕರ್ತವ್ಯ ಲೋಪ ಎಸಗಿದ್ದ ಆರೋಪದಡಿ ಚಿತ್ತಾಪುರ ತಾಲ್ಲೂಕಿನ ಅಳ್ಳೊಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ದೇವೇಂದ್ರಪ್ಪ ಭಾಲ್ಕಿ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಅವರು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಪತ್ರಿಕೆಯೊಂದರ ವರದಿಗಾರ ನಾಗಯ್ಯ ಸ್ವಾಮಿ ಅಲ್ಲೂರು ಅವರು 15ನೇ ಹಣಕಾಸು ಯೋಜನೆಯಡಿ ಖರ್ಚಾದ ಮಾಹಿತಿ ಕೊಡುವಂತೆ ಅಳ್ಳೊಳ್ಳಿ ಗ್ರಾ.ಪಂ.ಗೆ ಆರ್ಟಿಐ ಅರ್ಜಿ ಹಾಕಿದ್ದರು. ಖರ್ಚಿನ ಮಾಹಿತಿಯನ್ನು ನೀಡದೆ ಅರ್ಜಿದಾರನಿಗೆ ಫೋನ್ ಕರೆ ಮಾಡಿದ್ದ ಪಿಡಿಒ ದೇವೇಂದ್ರಪ್ಪ, ʼಬ್ಲಾಕ್ಮೇಲ್ ಮಾಡಲು ಅರ್ಜಿ ಹಾಕಿದ್ದೀಯಾ, ಪೊಲೀಸರಿಗೆ ದೂರು ಕೊಟ್ಟು ಒಳ ಹಾಕಿಸುತ್ತೇನೆʼ ಎಂದು ಬೆದರಿಕೆ ಹಾಕಿದ್ದರು ಎಂದು ಸಿಇಒ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ನಾಗಯ್ಯ ಸ್ವಾಮಿ ಅವರು ಚಿತ್ತಾಪುರ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ಸಲ್ಲಿಸಿದ್ದರು. ದೇವೇಂದ್ರಪ್ಪ ಅವರಿಗೆ ಇಒ ನೋಟಿಸ್ ನೀಡಿದ್ದರೂ ಸಮಜಾಯಿಷಿ ನೀಡಿರಲಿಲ್ಲ. ಜತೆಗೆ ಆರ್ಟಿಐ ಅಡಿ ಮಾಹಿತಿಯೂ ಕೊಡದೆ ಕರ್ತವ್ಯ ಪಾಲನೆಯಲ್ಲಿ ನಿರ್ಲಕ್ಷ್ಯ ತೋರಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ, ದೇವೇಂದ್ರಪ್ಪ ಅವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.