ಮರಳು ಮಾಫಿಯಾ ಮತ್ತು ಗೂಂಡಾಗಿರಿ ಮಟ್ಟ ಹಾಕಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೇಡರೇಶನ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಕಲಬುರ್ಗಿ ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ಅಕ್ರಮ ಮರಳು ಸಾಗಾಣಿಕೆ, ಮರಳು ಮಾಫಿಯಾ ದಿನದಿಂದ ದಿನಕ್ಕೆ ಬಲಿಷ್ಠಗೊಳ್ಳುತ್ತಿದೆ. ಇದೊಂದು ಭಾರೀ ಮಟ್ಟದ ಕಳ್ಳ ಧಂದೆಯಾಗಿ ಮುಂದುವರೆದಿದೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಕಬ್ಬಿಣದ ಅದಿರಿನ ಭಯಾನಕ ಅಕ್ರಮ ದಂಧೆಗೆ ಮೀರಿದ್ದು, ಕಾನೂನು ಬಾಹಿರ ರಾಜ್ಯದ ಗಣಿ ಲೂಟಿಗಿಂತ ಮೀರಿದ ಅಕ್ರಮ ಮರಳು ದಂಧೆ ನಡೆದಿದೆ. ಇದರಲ್ಲಿ ನೂರಾರು ಕೋಟಿ ರೂಪಾಯಿ ಅಕ್ರಮ ವ್ಯವಹಾರ ಇದೆ. ಇದರಲ್ಲಿ ಜಿಲ್ಲೆಯ ಮತ್ತು ಹೊರಗಿನ ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಕೈವಾಡ ಇದೆ” ಎಂದು ಆರೋಪಿಸಿದರು.
“ಜೇವರ್ಗಿ ತಾಲೂಕಿನ ನೆಲೋಗಿ ಪೋಲಿಸ್ ಠಾಣೆಯ ಮುಖ್ಯ ಪೇದೆ ಮಯೂರ ರಾಠೋಡ ಅವರು ಜೂನ್. 26ರಂದು ಮರಳು ಮಾಫಿಯಾಗೆ ಬಲಿಯಾಗಿದ್ದಾರೆ” ಎಂದು ಕಂಬನಿ ಮಿಡಿದರು.
“ಭೀಮಾ ನದಿಯಿಂದ ಮರಳನ್ನು ಅಕ್ರಮವಾಗಿ ಸಾಗಣೆ ಮಾಡುವುದನ್ನು ತಡೆಯಲು ಹೋದಾಗ ಅಕ್ರಮ ಮರಳು ದಂಧೆ ಕೋರರು ಈ ದುಷ್ಟ ಕೃತ್ಯ ಎಸಗಿದ್ದಾರೆ. ಹೀಗೆ ಜಿಲ್ಲೆಯ ಪೋಲಿಸ್ ಮತ್ತು ಆಡಳಿತಕ್ಕೆ ಸೆಡ್ಡು ಹೊಡೆಯುವ ಮಟ್ಟಿಗೆ ಈ ಮರಳು ಮಾಫಿಯಾಗಳು ಬಲಿಷ್ಠವಾಗಿ ಬೆಳೆದು ನಿಂತಿದ್ದಾರೆ. ಇದರ ಹಿಂದೆ ರಾಜಕಾರಣಿಗಳ ಕೈವಾಡ ಇದೆ” ಎಂದು ಆರೋಪಿಸಿದರು.
“ಈ ಹಿಂದೆಯೂ ಪೊಲೀಸರು ಮತ್ತು ಅಧಿಕಾರಿಗಳ ಮೇಲೆ ಹತ್ಯೆ ಯತ್ನ ನಡೆದಿದೆ. ಭದ್ರಾ ನದಿಯಲ್ಲಿ ಮರಳು ಸಾಗಾಣಿಕೆ ತಡೆಯಲು ಹೋದ ಜಿಲ್ಲಾಧಿಕಾರಿ ಕೊಲೆಯತ್ನ ನಡೆದಿದೆ. ಅಫಜಲಪುರ ತಹಶೀಲ್ದಾರ್ ಮೇಲೆ ಟಿಪ್ಪರ್ ಹರಿಸಿ ಹತ್ಯೆಗೈಯ್ಯುವ ಯತ್ನ ನಡೆದಿತ್ತು. ಈಗ ಕರ್ತವ್ಯ ನಿರತ ಪೊಲೀಸ್ ಹೆಡ್ ಕಾನ್ಸ್‌ಟೆಬಲ್ ಹತ್ಯೆಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕಲಬುರಗಿ ಜಿಲ್ಲೆಯ ನಾಗರಿಕ ಬಂಧುಗಳು ಮತ್ತು ಕಾನೂನು ಸುವ್ಯವಸ್ಥೆಗೆ ಸವಾಲಾಗಿರುವ ಈ ಮರಳು ಮಾಫಿಯಾ ಪೈಶಾಚಿಕ ಕೃತ್ಯ ಮಟ್ಟ ಹಾಕಬೇಕೆಂದರೆ, ಇದರಲ್ಲಿ ಶಾಮೀಲಾಗಿರುವ ಮುಖಂಡರು ಮತ್ತು ಅಧಿಕಾರಿಗಳನ್ನು ಹದ್ದು ಬಸ್ತಿಗೆ ತರಲು ಕಠಿಣ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯದ ನಾನಾ ಭಾಗಗಳಲ್ಲಿ ಲೋಕಾಯುಕ್ತ ದಾಳಿ
ಜೇವರ್ಗಿ ಘಟನೆಯಲ್ಲಿ ಶಾಮೀಲಾಗಿರುವ ರಾಜಕಾರಣಿಗಳು ಮತ್ತು ಇತರ ಹಿಂಬಾಲಕರನ್ನು ಗುರುತಿಸಿ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿದೆ.
ಶರಣಬಸಪ್ಪ ಮಮಶೆಟ್ಟಿ, ನಾಗಯ್ಯಾ ಸ್ವಾಮಿ, ಸುಭಾಷ್ ಹೊಸಮನಿ ಎಂ ಬಿ ಸಜ್ಜನ್, ದಿಲೀಪ್ ಕುಮಾರ್, ನಾಗೂರೆ ಹುರಮುಂಜಿ, ಅಲ್ತಾಫ್ ಇನಾಂದಾರ್, ಜಾವೇದ್, ಹುಸೈನ್, ರಾಯಪ್ಪ, ಯಶ್ವಂತ್ ರಾಯ್ ಪಾಟೀಲ್ ಇದ್ದರು.