ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಖಣದಾಳ ಗ್ರಾಮದ ಮುಖ್ಯರಸ್ತೆ ಗುಂಡಿಗಳಿಂದ ತುಂಬಿಹೋಗಿದೆ. ರಸ್ತೆಯ ಇಕ್ಕೆಲಗಳು ಕಿತ್ತುಹೋಗಿದ್ದು, ವಾಹನಗಳ ಸಂಚಾರ ದುಸ್ತರವಾಗಿದೆ. ವಾಹನ ಸವಾರರು ರಸ್ತೆಯಲ್ಲಿ ವಾಹನ ಚಲಾಯಿಸಲಾಗದೆ ಹೈರಾಣಾಗಿದ್ದಾರೆ. ಆದರೂ, ರಸ್ತೆಯ ದುರಸ್ತಿ ಮಾತ್ರ ಮರೀಚಿಕೆಯಾಗಿದೆ.
ಖಣದಾಳ, ಇಟಗಿ, ಮರತುರು ಹಾಗೂ ಶಹಾಬಾದ್‌ಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಇದಾಗಿದೆ. ಆದರೆ, ರಸ್ತೆ ಹಲವು ವರ್ಷಗಳಿಂದ ಡಾಂಬರಿಕಣವೇ ಕಂಡಿಲ್ಲ. ರಸ್ತೆ ಭಾರೀ ಗುಂಡಿಗಳಿಂದ ಕೂಡಿದ್ದು, ಸಂಚಾರ ನರಕಯಾತನೆಯಾಗಿದೆ. ವಾಹನ ಸವಾರರು ಗುಂಡಿಗಳಿಂದ ತಪ್ಪಿಸುವ ಯತ್ನದಲ್ಲಿ ಅಪಘಾತಕ್ಕೀಡಾಗಿರುವ ಹಲವಾರು ಘಟನೆಗಳು ನಡೆದಿವೆ. ರಸ್ತೆ ಸರಿಯಿಲ್ಲದ ಕಾರಣ ಬಸ್ ಸಂಚಾರವು ಕಡಿಮೆ ಆಗಿವೆ. ಬಸ್ ಇಲ್ಲದೆ, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
ರಸ್ತೆ ಸಮಸ್ಯೆಯ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಖಣದಾಳ ಗ್ರಾಮದ ನಿವಾಸಿ ಶಾಂತಾಬಾಯಿ, “ನಮ್ಮ ಊರಿನ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಒಂದು ವಾರದ ಹಿಂದೆ ನನ್ನ ಮಗ ಇದೆ ರಸ್ತೆಯ ಗುಂಡಿಯಲ್ಲಿ ಬಿದು ಗಾಯ ಮಾಡಿಕೊಂಡಿದ್ದಾನೆ. ಆದಷ್ಟು ಬೇಗ ರಸ್ತೆ ಸರಿಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.
ಮತ್ತೋರ್ವ ನಿವಾಸಿ ಕವಿತಾ ಮಾತನಾಡಿ, “ಗ್ರಾಮದಿಂದ ಅನೇಕ ಮಕ್ಕಳು ಶಾಲೆ ಕಾಲೇಜಿಗೆ ಬಸ್, ಬೈಕ್, ಆಟೋದಲ್ಲಿ ಹೋಗುತ್ತಾರೆ. ಹದಗೆಟ್ಟಿರುವ ರಸ್ತೆಯಿಂದ ಏನಾದರು ಅನಾಹುತ ಸಂಭವಿಸುವ ಮೊದಲೇ ರಸ್ತೆ ದುರಸ್ತಿ ಮಾಡಬೇಕು” ಎಂದು ಅಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?: 6,195 ಶಾಲಾ ಶೌಚಾಲಯ ನಿರ್ಮಾಣ ಗುರಿ; 2,367 ಶೌಚಾಲಯ ಪೂರ್ಣ: ಸಚಿವ ಪ್ರಿಯಾಂಕ್ ಖರ್ಗೆ
ಗ್ರಾಮದ ನಿವಾಸಿ ಸೂರ್ಯಕಾಂತ ಮಾತನಾಡಿ, “ಚುನಾವಣೆ ಸಂದರ್ಭದಲ್ಲಿ ಓಟು ಕೇಳಲು ಗ್ರಾಮಕ್ಕೆ ಬರುವ ಶಾಸಕರು ಚುನಾವಣೆ ಮುಗಿದ ನಂತರ ನಮ್ಮ ಪರಿಸ್ಥಿತಿ ಬಗ್ಗೆಯಾಗಲಿ, ಗ್ರಾಮಗಳು ಅಭಿವೃದ್ಧಿ ಬಗ್ಗೆಯಾಗಲಿ ಯೋಚನೆ ಮಾಡುವುದಿಲ್ಲ. ಚುನಾವಣೆ ಬಂದಾಗ ರಸ್ತೆಗೆ ಪ್ಯಾಚ್ ವರ್ಕ್ ಮಾಡುತ್ತಾರೆ. ಅದು ಮಳೆಗಾಲದಲ್ಲಿ ಕಿತ್ತು ಹೋಗುತ್ತದೆ. ಸಂಪೂರ್ಣವಾಗಿ ರಸ್ತೆ ಡಾಂಬರಿಕರಣ ಮಾಡಿಕೊಡಬೇಕು. ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಈದಿನ.ಕಾಮ್ ಜೊತೆ ಮಾತನಾಡಿದ ಪಿಡಿಒ ಪ್ರಭುದೇವ್ ರೆಡ್ಡಿ, “ಈ ಹಿಂದೆ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವ ಓವರ್ ಲೋಡ್ ಲಾರಿಗಳಿಂದಾಗಿ ರಸ್ತೆ ಹದಗೆಟ್ಟಿದೆ. ಇತ್ತೀಚೆಗೆ ಅಕ್ರಮ ಮರಳು ಸಾಗಾಣಿಕೆ ಕಡಿವಾಣ ಬಿದ್ದಿದೆ. ರಸ್ತೆ ದುರಸ್ತಿ ಕುರಿತು ನಾನು ಶಾಸಕರ ಗಮನಕ್ಕೆ ತಂದಿದ್ದೇನೆ. ಮುಂದಿನ ಅನುದಾನದಲ್ಲಿ ರಸ್ತೆ ದುರಸ್ತಿ ಮಾಡಲಾಗುವುದು” ಎಂದು ತಿಳಿಸಿದ್ದಾರೆ.