ಕೋಲ್ಕತ್ತಾ ವೈದ್ಯಯ ಅತ್ಯಾಚಾರ-ಕೊಲೆ ಹಾಗೂ ಕೊಪ್ಪಳದಲ್ಲಿ ದಲಿತ ಯುವಕನ ಕೊಲೆ ಘಟನೆಯನ್ನು ಖಂಡಿಸಿ ದಲಿತ ಸೇನೆಯ ವತಿಯಿಂದ ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಪ್ರತಿಭಟನೆ ನಡೆಸಲಾಯಿತು.
ಸೇಡಂನ ದಲಿತ ಸೇನೆ ತಾಲೂಕು ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ಈ ಪ್ರತಿಭಟನೆಯನ್ನು ಡಾ. ಅಂಬೇಡ್ಕರ್ ಪುತ್ಥಳಿಯಿಂದ ಬಸವೇಶ್ವರ ಸರ್ಕಲ್ ವರೆಗೆ ಮೆರವಣಿಗೆ ನಡೆಸಿ, ಬಳಿಕ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ದೇಶದಲ್ಲಿ ಎರಡು ಅಮಾನವೀಯ ಘಟನೆ ನಡೆದಿದ್ದು, ಕೃತ್ಯ ಎಸಗಿದ ಆರೋಪಿಗಳಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮನವಿ ಪತ್ರ ಸಲ್ಲಿಸಿದ ಸೇಡಂ ತಾಲೂಕು ಅಧ್ಯಕ್ಷ ಮೈಲಾರಿ ಎಚ್ ಕಾಸ್ಕರ್ ಮಾತನಾಡಿ, “ಆಗಸ್ಟ್ 9 ರಂದು ನಡೆದ ಕೋಲ್ಕತ್ತಾ ಆರ್. ಜಿ. ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವೈದ್ಯ ಮೇಲಿನ ಕ್ರೂರ, ಅಮಾನವೀಯ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣ ಇಡೀ ದೇಶ ಚರ್ಚೆ ವಿಷಯವಾಗಿದೆ. ರಾಜ್ಯದಲ್ಲಿ ಆಗಸ್ಟ್ 18 ರಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಹಾಲ ಗ್ರಾಮದಲ್ಲಿ ದಲಿತ ಯುವಕನನ್ನು ಹೇರ್ ಕಟ್ ಮಾಡಲು ನಿರಾಕರಿಸಿ, ಕತ್ತರಿಯಿಂದ ಇರಿದು ಹತ್ಯೆ ಮಾಡಿರುವುದು ಅನಾಗರಿಕವಾದ ಕೃತ್ಯ. ಈ ಎರಡು ಘಟನೆಗಳು ಜಗತ್ತಿನಲ್ಲಿ ಭಾರತ ದೇಶವೇ ತಲೆ ತಗ್ಗಿಸುವಂತಾಗಿದೆ” ಎಂದರು.
ಭಾರತ ಸಂವಿಧಾನದಲ್ಲಿ ಅಸ್ಪೃಶ್ಯತೆ ನಿರ್ಮೂಲನೆಗಾಗಿ ಕಾನೂನುಗಳು ಇದ್ದರೂ ಸಹ ಹಳ್ಳಿಗಳಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ನಡೆದ ಘಟನೆ ಇದಕ್ಕೆ ಜೀವಂತ ಸಾಕ್ಷಿಯಾಗಿದೆ. ಕೂಡಲೇ ಸಮಾಜ ಕಲ್ಯಾಣ ಇಲಾಖೆ ಎಚ್ಚೆತ್ತುಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯ ಹಾಗೂ ಅಸ್ಪೃಶ್ಯತೆಯನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಕಾಲುವೆ ಮುಚ್ಚಿ ಹಾಕಿದ ಬಗ್ಗೆ ದೂರು ನೀಡಿದರೂ ಕ್ರಮವಿಲ್ಲ; ಅಧಿಕಾರಿಗಳ ವಿರುದ್ಧ ಆರೋಪ
ಜೀವ ಉಳಿಸುವ ವೈದ್ಯರನ್ನು ದೇವರಂತೆ ಕಾಣುವ ದೇಶದಲ್ಲಿ ಸಂಜಯರಾವ್ ಎಂಭ ವಿಕೃತ ಕಾಮುಕ ಅತ್ಯಂತ ಪೈಶಾಚಿಕ ರೀತಿಯಲ್ಲಿ ಅತ್ಯಾಚಾರ ಎಸಗಿ ಭೀಕರ ಕೊಲೆ ಮಾಡಿದ್ದಾನೆ. ಈ ಪ್ರಕರಣದಲ್ಲಿ ಇನ್ನೂ ಅನೇಕ ಕಾಣದ ಕೈಗಳು ಶಾಮೀಲಾಗಿದೆ. ಆರೋಪಿಗಳಿಗೆ ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆಗೆ ಗುರಿಪಡಿಸಿ, ದೇಶದಲ್ಲಿ ಮತ್ತೊಮ್ಮೆ ಇಂತಹ ಪ್ರಕರಣಗಳನ್ನು ಮರುಕಳಿಸಿದಂತೆ ರಾಷ್ಟ್ರಪತಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕಕು ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು
ಈ ಸಂದರ್ಭದಲ್ಲಿ ಮೈಲಾರಿ ದೊಡ್ಡಮನಿ, ಯುವ ಘಟಕ ಅಧ್ಯಕ್ಷ ಮೊಹಮ್ಮದ್ ಖದೀರ್, ಖಾಲಿದ್, ಖಾದರ್ ಇನ್ನಿತರರು ಉಪಸ್ಥಿತರಿದ್ದರು.
