ವಿದ್ಯುತ್ ಮೀಟರೀಕರಣದ ಕೆಇಆರ್‌ಸಿ ಸುತ್ತೋಲೆ ವಿರೋಧಿಸಿ ಹಾಗೂ ವಿದ್ಯುತ್ ದರ ಏರಿಕೆ ಧಿಕ್ಕರಿಸಿ ಕರ್ನಾಟಕ ಪ್ರಾಂತ ರೈತ ಸಂಘದ(ಕೆಪಿಆರ್‌ಎಸ್) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಲಬುರಗಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ವಿದ್ಯುತ್ ಸರಬರಾಜು ಕಂಪನಿ ವ್ಯವಸ್ಥಾಪಕ ನಿರ್ದೇಶಕರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
“ಹತ್ತು ಎಚ್‌ಪಿಗಿಂತ ಕಡಿಮೆ ಇರುವ ಎಲ್ಲ ಕೃಷಿ ಪಂಪಸೆಟ್‌ಗಳಿಗೆ, ಮೀಟರ್ ಅಳವಡಿಸಿ, ಅದರ ಆರ್‌ಆರ್ ನಂಬರ್‌ಗಳನ್ನು ರೈತರ ಆಧಾರ್ ಕಾರ್ಡ್ ಜೊತೆ ಜೋಡಣೆ ಮಾಡಬೇಕು ಎಂದು ರಾಜ್ಯದ ಎಲ್ಲ ವಿದ್ಯುತ್ ವಿತರಣಾ ಕಂಪನಿಗಳಿಗೆ ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‌ಸಿ) ಆದೇಶ ಹೊರಡಿಸಿರುವುದು ಪಂಪಸೆಟ್ ಅವಲಂಬಿಸಿ ಕೃಷಿ ಮಾಡುತ್ತಿರುವ ರೈತರಿಗೆ ಅಘಾತಕಾರಿಯಾಗಿದೆ” ಎಂದು ಕರ್ನಾಟಕ ಪ್ರಾಂತ ರೈತ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
“ಆರು ತಿಂಗಳ ಒಳಗೆ ಎಲ್ಲ ಕೃಷಿ ಪಂಪಸೆಟ್‌ಗಳಿಗೆ ಆಧಾರ್ ಕಾರ್ಡ್ ಜೋಡಣೆ ಮಾಡದಿದ್ದರೆ ಅಂತಹ ಕೃಷಿ ಪಂಪಸೆಟ್‌ಗಳಿಗೆ ಸರ್ಕಾರದ ಸಹಾಯಧನ ಬಿಡುಗಡೆ ಮಾಡುವುದಿಲ್ಲ ಎಂದು ಎಚ್ಚರಿಸಿರುವ ಕೆಇಆರ್‌ಸಿ ಸುತ್ತೋಲೆಯನ್ನು ಕೂಡಲೆ ಹಿಂಪಡೆಯಲು ಬೇಕಾದ ಅಗತ್ಯ ಕ್ರಮಗಳನ್ನು ಅನುಸರಿಸಿ ರೈತರ ಆತಂಕವನ್ನು ನಿವಾರಿಸಬೇಕು” ಎಂದು ರಾಜ್ಯ ಸರ್ಕಾರದ ಇಂಧನ ಇಲಾಖೆಯನ್ನು ಒತ್ತಾಯಿಸಿದ್ದಾರೆ.
“ಕೃಷಿಯಿಂದ ಈಗಾಗಲೇ ನಷ್ಟ ಅನುಭವಿಸುತ್ತಿದ್ದೇವೆ. ಕೃಷಿ ಲಾಗುವಾಡುಗಳ ದುಬಾರಿ ವೆಚ್ಚದಿಂದಾಗಿ ಪ್ರತಿಯೊಂದು ರೈತ ಕುಟುಂಬವು ಅಪಾರ ಸಾಲ- ಕಟವನ್ನು ಎದುರಿಸುತ್ತಿದೆ. ದೇಶದ ಹಾಗೂ ರಾಜ್ಯದ ಆಹಾರ ಭದ್ರತೆ, ಸ್ವಾವಲಂಬನೆಗೆ ಇಷ್ಟೆಲ್ಲಾ ಸಂಕಟಗಳ ನಡುವೆ ಶ್ರಮಿಸುತ್ತಿರುವ ರೈತರನ್ನು ಮತ್ತಷ್ಟು ಸಂಕಟಕ್ಕೆ ತಳ್ಳುವ ಕ್ರಮಗಳು ರೈತ ಸಮುದಾಯದ ಆತ್ಮಸ್ಥೈರ್ಯವನ್ನೇ ಕುಗ್ಗಿಸುತ್ತವೆ” ಎಂದು ಬೇಸರ ವ್ಯಕ್ತಪಡಿಸಿದರು.
“ಭೂಮಿ ಮತ್ತು ನೀರು ರೈತರ ಮೂಲಭೂತ ಅವಶ್ಯಕತೆಯಾಗಿದೆ. ಇಂತಹ ಅಗತ್ಯಗಳನ್ನು ಪೂರೈಸುವ ಜವಾಬ್ದಾರಿ ಇರುವ ಸರ್ಕಾರಗಳು ತಮ್ಮ ಹೊಣೆಗಾರಿಕೆಯಿಂದ ನುಣಚಿಕೊಳ್ಳುವಂತಿಲ್ಲ. ಜೀವನ ವೆಚ್ಚ ಮತ್ತು ಬೇಸಾಯದ ವೆಚ್ಚದ ಅಧಿಕ ಭಾರದಿಂದ ನರಳುತ್ತಿರುವ ರೈತರ ಗಾಯದ ಮೇಲೆ ಬರೆ ಎಳೆಯುವ ಇಂತಹ ನಿರ್ಧಾರಗಳನ್ನು ಕೂಡಲೇ ಕೈ ಬಿಡಬೇಕು” ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ.
ಈ ಸುದ್ದಿ ಓದಿದ್ದೀರಾ? ಪ್ರಕೃತಿ ವಿಕೋಪಗಳಿಗೆ ನೀಡುವ ಪರಿಹಾರ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಸಚಿವ ಕೃಷ್ಣ ಭೈರೇಗೌಡ ಒತ್ತಾಯ
“ವಿದ್ಯುತ್ ರಂಗವನ್ನು ಸಂಪೂರ್ಣ ಖಾಸಗೀಕರಣ ಮಾಡುವ ಕರಾಳ ವಿದ್ಯುತ್ ತಿದ್ದುಪಡಿ ಕಾಯ್ದೆ 2022 ರೈತರ ಪ್ರಬಲ ವಿರೋಧದ ನಡುವೆಯೂ ಸಂಸತ್ತಿನಲ್ಲಿ ಮಂಡನೆಯಾಗಿದೆ. ಇದು ಸಂಸತ್ತಿನಲ್ಲಿ ಅಂಗೀಕಾರ ಆಗುವ ಮುನ್ನವೇ ಇಂತಹ ರೈತ ವಿರೋಧಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡುವ ಪ್ರಯತ್ನವು ಕಾನೂನಿನ ಆಳ್ವಿಕೆಯ ಅಣಕವಾಗಿದೆ” ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕೆಪಿಆರ್‌ಎಸ್ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಸೈಯಿಬಣ್ಣ ಗುಡುಬಾ, ಸುಭಾಷ್ ಹೊಸಮನಿ, ಅಲ್ತಾಫ್ ಇನಾಂದಾರ್, ಗೌರಮ್ಮ ಪಿ ಪಾಟೀಲ್, ಎಂ ಬಿ ಸಜ್ಜನ್, ರಾಯಪ್ಪ ಹುರಮುಂಜಿ, ನಾಗಯ್ಯಾ ಸ್ವಾಮಿ, ಮೇಘರಾಜ ಕಠಾರೆ, ರೇವಣ್ಣಸಿದ್ದಪ್ಪಾ ಪಾಟೀಲ್, ರೇವಣಸಿದ್ಧಪ್ಪಾ ಮುಕರಂಬಿ ಇದ್ದರು.