ಕಳೆದ ಕೆಲ ದಿನಗಳಿಂದ ಕಲಬುರಗಿ ಜಿಲ್ಲೆಯಾದ್ಯಂತ ಸತತ ಸುರಿದ ಮಳೆಯಿಂದಾಗಿ ತೊಗರಿ, ಹೆಸರು, ಉದ್ದು, ಹತ್ತಿ, ಸೋಯಾಬಿನ್ ಸೇರಿದಂತೆ ಇತರೆ ಬೆಳೆ ಹಾನಿಯಾಗಿದ್ದು, ರೈತರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ತೊಗರಿ (59,5150) ಹೆಕ್ಟೇರ್, ಹೆಸರು (50,121) ಹೆಕ್ಟೇರ್, ಉದ್ದು (30,890 ಹೆಕ್ಟೇರ್), ಸೋಯಾಅವರೆ (23,440) ಹೆಕ್ಟೇರ್ ಹಾಗೂ ಹತ್ತಿ (98,550) ಹೆಕ್ಟೇರ್ ಮುಂಗಾರು ಬಿತ್ತನೆಯಾಗಿದೆ. ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆಯಿಂದಾಗಿ ಸಂತಸಗೊಂಡ ರೈತರು ಬಿತ್ತನೆ ಕಾರ್ಯ ಕೈಗೊಂಡು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದರು. ಆದರೆ, ಆಗಸ್ಟ್ ಮೊದಲ ವಾರದಲ್ಲಿ ಸುರಿದ ಅಧಿಕ ಮಳೆಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ ಎಂದು ರೈತರು ಹೇಳುತ್ತಿದ್ದಾರೆ.
ಈ ಬಾರಿ ಹೆಸರು ಬೆಳೆ ಚನ್ನಾಗಿ ಮೊಳಕೆಯೊಡೆದು, ಕೆಲ ದಿನಗಳಲ್ಲಿ ಕಟಾವಿಗೆ ಬಂದಿತು. ಆದರೆ, ಬಿಟ್ಟು ಬಿಡದೆ ನಿರಂತರ ಸುರಿದ ಜಿಟಿ ಜಿಟಿ ಮಳೆಗೆ ಅಧಿಕ ತೇವಾಂಶದಿಂದ ಹೆಸರು ನೆಲಕಚ್ಚಿದೆ. ಇನ್ನು ಅಧಿಕ ಮಳೆಯಿಂದ ಜಿಲ್ಲೆಯ ಮುಲ್ಲಾಮಾರಿ ಏತ ನೀರಾವರಿ, ಚಂದ್ರಂಪಳ್ಳಿ ಡ್ಯಾಮ್, ಗಂಡೂರಿ ನಾಲಾ ಅಣೆಕಟ್ಟು, ಭೀಮಾ ನದಿ, ಆಲಮಟ್ಟಿ, ನಾರಾಯಣಪುರ ಡ್ಯಾಮ್, ಕೃಷ್ಣ ನದಿ, ಬೆಣ್ಣೆತೋರೆ ಡ್ಯಾಮ್‌ಗಳು ಮೈದುಂಬಿ ಹರಿಯುತ್ತಿದ್ದು, ನೀರಿನ ಹರಿವು ಹೆಚ್ಚಾದ ಪರಿಣಾಮ ಹರಿಬಿಡಲಾಗಿದೆ, ಇದರಿಂದ ತಗ್ಗು ಪ್ರದೇಶಗಳ ಜಮೀನುಗಳು ಜಲಾವೃತಗೊಂಡು ಬೆಳೆ ಹಾನಿಯಾಗಿದೆ.
ಅತಿವೃಷ್ಟಿಯಿಂದ ʼಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲʼ ಎಂಬಂತೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಚಿಂತೆಗೀಡಾಗಿದ್ದಾರೆ. ಜಮೀನುಗಳಲ್ಲಿ ನೀರು ನಿಂತಿದ್ದ ಪರಿಣಾಮ ಬೆಳೆ ಸಂಪೂರ್ಣ ನೆಲಕಚ್ಚಿದೆ. ಬೆಳೆ ಕಳೆದುಕೊಂಡ ರೈತರು ಪರಿಹಾರದ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ʼಅತಿವೃಷ್ಟಿಯಿಂದ ಹತ್ತಿ, ತೊಗರಿ, ಹೆಸರು, ಸೋಯಾಬಿನ್ ಹಾನಿಯಾಗಿದೆ. ಸಾಲ ಸೂಲ ಮಾಡಿ ಬೆಳೆದ ಬೆಳೆ ಕೈಗೆ ಬಾರದೆ ಹಾನಿಯಾಗಿದೆ. ಬೀಜ, ರಸಗೊಬ್ಬರ, ಯೂರಿಯಾ ಔಷಧಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ ಅನ್ನದಾತನಿಗೆ ಆರ್ಥಿಕ ನಷ್ಟ ಎದುರಾಗಿದೆ. ಅತಿವೃಷ್ಟಿ-ಅನಾವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರು ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಬೆಳೆ ಹಾನಿ ಸಮೀಕ್ಷೆ ಮಾಡಿ ಪರಿಹಾರ ಕೊಡಬೇಕು. ಹಿಂದಿನ ವರ್ಷದ 315 ಕೋಟಿ ರೂ. ಬೆಳೆ ವಿಮೆ ಹಣ ಬಿಡುಗಡೆ ಮಾಡಿ ರೈತರ ಖಾತೆಗೆ ಜಮೆ ಮಾಡಬೇಕುʼ ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಮಾತನಾಡಿ, ʼ ಜಿಲ್ಲೆಯಲ್ಲಿ ಈ ಭಾರಿ ಸುರಿದ ಅಧಿಕ ಮಳೆಯಿಂದ ಬೆಳೆ ಹಾನಿಯಾಗಿದೆ. ತೊಗರಿ ಕಣಜ ಎಂದೇ ಕರೆಯುವ ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ರೈತರು ತೊಗರಿ ಬಿತ್ತನೆ ಮಾಡಿದರು. ಆದರೆ, ಅತಿವೃಷ್ಟಿಯಿಂದ ಹಾನಿಗೊಳಗಾಗಿದೆ. ಕೂಡಲೇ ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಸರ್ಕಾರ ಶೀಘ್ರದಲ್ಲಿ ಹೆಚ್ಚಿನ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕುʼ ಎಂದರು.
ʼಅಫಜಲಪುರ ತಾಲೂಕಿನಲ್ಲಿ ಹತ್ತಿ, ತೊಗರಿ, ಸೋಯಾಬಿನ್, ಕಬ್ಬು ಸೇರಿದಂತೆ ತೋಟಗಾರಿಕೆ ಬೆಳೆಗಳು ಭಾರಿ ಮಳೆಗೆ ಹಾನಿಗೀಡಾಗಿವೆ. ಮಹಾರಾಷ್ಟ್ರದ ದುದನಿ ನಾಲಾ ನೀರು, ಅಮರ್ಜಾ ಭೀಮಾ ನದಿಗಳಿಗೆ ನೀರು ಹರಿಬಿಟ್ಟಿರುವ ಕಾರಣ ತಾಲೂಕಿನಾದ್ಯಂತ ಶೇಕಡಾ 70ರಷ್ಟು ಬೆಳೆ ಹಾನಿಯಾಗಿದೆʼ ಕರ್ನಾಟಕ ಪ್ರಾಂತ ರೈತ ಸಂಘದ ಶ್ರೀಮಂತ ಬಿರಾದಾರ ಹೇಳುತ್ತಾರೆ.
ʼಭೀಮಾನದಿ ದಡ ಜಮೀನುಗಳಲ್ಲಿ ಬೆಳೆಯಲಾದ ಕಬ್ಬು, ಬಾಳೆ ನೀರಿನ ಹರಿವು ಹೆಚ್ಚಳದಿಂದ ಜಮೀನುಗಳು ಜಲಾವೃತಗೊಂಡು ಬೆಳೆ ಹಾನಿಯಾಗಿದೆ. ಹಾನಿಯಾದ ಕೃಷಿ ಬೆಳೆಗೆ ಪ್ರತಿ ಎಕರೆಗೆ 25 ಸಾವಿರ ಹಾಗೂ ತೋಟಗಾರಿಕೆ ಬೆಳೆಗೆ 40 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಬೇಕು. ಸಾಲ ವಸೂಲಾತಿ ನಿಲ್ಲಿಸಿ ರೈತರ ಸಾಲಾ ಮನ್ನಾ ಮಾಡಬೇಕುʼ ಎಂದು ಅವರು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಕಾರ್ಯಧ್ಯಕ್ಷ ಕರೆಪ್ಪ ಕರಗೊಂಡ ಆಳಂಡ ಅವರು ಮಾತನಾಡಿ, ʼಸತತ ಮಳೆಗೆ ತೇವಾಂಶ ಹೆಚ್ಚಾಗಿರುವುದೇ ಬೆಳೆ ಹಾನಿಗೆ ಕಾರಣ. ಪೋಷಕಾಂಶ ಕೊರತೆಯಿಂದ ಎಲೆಗಳು ಹಳದಿಯಾಗಿ, ಮಚ್ಚೆ ರೋಗ ಬರುತ್ತಿದೆ. ಮಳೆ ನಿಂತರೂ ರೋಗ ತಪ್ಪಿದ್ದಲ್ಲ. ರಾಜ್ಯ ಕೃಷಿ ಸಚಿವವರು ಇಲ್ಲಿಯವರೆಗೆ ಉತ್ತರ ಕರ್ನಾಟಕದ ಯಾವುದೇ ಜಿಲ್ಲೆಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಅಲಿಸಿಲ್ಲ. ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆʼ ಎಂದು ತಿಳಿಸಿದರು.
ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ʼಈದಿನʼ ಜೊತೆಗೆ ಮಾತನಾಡಿ, ʼಮಳೆಯಿಂದ ಹಾನಿಯಾದ ಬೆಳೆ ವೀಕ್ಷಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಎಷ್ಟು ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂಬುದು ನಿಖರ ಮಾಹಿತಿ ಸಿಗುತ್ತುಲ್ಲ. ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆʼ ಎಂದರು.
ಇದನ್ನೂ ಓದಿ : ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ
ಕೃಷಿ ತಜ್ಞ ಡಾ.ರಾಜು ತೆಗ್ಗಳಿ ಮಾತನಾಡಿ, ʼಅಧಿಕ ಮಳೆಯಿಂದಾಗಿ ಬೆಳೆಗೆ ಮಚ್ಚಿ ಫೈಟಾಫ್ತೇರಾ ಎಲೆ ಮತ್ತು ಕಾಂಡ ಮಚ್ಚೆ ರೋಗ ಬರುವ ಸಾಧ್ಯತೆಗಳು ಇರುತ್ತವೆ. ಜಮೀನಿನಲ್ಲಿ ನಿಂತ ನೀರು ಬಸಿಗಾವಲು ಮಾಡುವುದರ ಮೂಲಕ ನೀರು ಹೊರಹಾಕಿದರೆ ಈ ರೋಗ ತಡೆಯಬಹುದು. ಯೂರಿಯಾ ಬಳಸಿದರೆ ಪೋಷಕಾಂಶ ಕಳೆದುಕೊಂಡ ಬೆಳೆ ಪುನಃ ಚೇತರಿಸಿಕೊಳ್ಳುತ್ತದೆ. ಒಂದು ಲೀಟರ್ ನೀರಿನಲ್ಲಿ ಟ್ರೈ ಕೋಡರ್ಮ ಪ್ರತಿ ಎಕರೆಗೆ 5 ಗ್ರಾಂ ಬೆರೆಸಿ ಸಿಂಪಡಿಸುವುದರಿಂದ ನೆಟೆರೋಗ ತಡೆಗಟ್ಟಬಹುದುʼ ಎಂದು ಮಾಹಿತಿ ತಿಳಿಸಿದರು.