ಹಿಂದಿನ ಸರ್ಕಾರದ ಅವಧಿಯಲ್ಲಿ ಕೆಇಆರ್‌ಸಿ ನಿಗದಿಪಡಿಸಿದ ವಿದ್ಯುತ್ ದರ ಏರಿಕೆಯನ್ನು ಈಗಿನ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಏಕೆ ಒಪ್ಪಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಲಕ್ಷ್ಮಣ ದಸ್ತಿ ಪ್ರಶ್ನಿಸಿದ್ದಾರೆ.
“ಸಿದ್ಧರಾಮಯ್ಯ ನೇತೃತ್ವದ ನೂತನ ಸರ್ಕಾರ ಹಿಂದಿನ ಸರ್ಕಾರದ ಆಡಳಿತ ವಿರೋಧಿ ಅಲೆ ಮತ್ತು ಕಾಂಗ್ರೆಸ್‌ನ ಐದು ಜನಪರ ಗ್ಯಾರಂಟಿಗಳ ಭರವಸೆಗಳಿಂದ ಅಧಿಕಾರಕ್ಕೆ ಬಂದಿರುವುದು ಸಂತೋಷದ ವಿಷಯ. ಸರ್ಕಾರ ಅಧಿಕಾರ ವಹಿಸಿಕೊಂಡ ಕೂಡಲೇ, ಅನೇಕ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಮತ್ತು ಹಿಂದಿನ ಸರ್ಕಾರದ ಕೆಲವೊಂದು ತಪ್ಪು ನಿರ್ಧಾರಗಳನ್ನು ಹಿಂಪಡೆದಿರುವುದು ಸ್ವಾಗತಾರ್ಹ” ಎಂದು ಅಭಿಪ್ರಾಯಪಟ್ಟರು.
“ಅವೈಜ್ಞಾನಿಕ ಮಾದರಿಯ ಕೆಇಆರ್‌ಸಿ ನಿಗದಿಪಡಿಸಿದ ಜನವಿರೋಧಿ ದರಗಳನ್ನು ನೂತನ ಕಾಂಗ್ರೆಸ್ ಸರ್ಕಾರ ತಕ್ಷಣ ಹಿಂಪಡೆದು ಜನರ ಧ್ವನಿಗೆ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ, ಸರ್ಕಾರ ಕೊಟ್ಟಿರುವ ಐದು ಗ್ಯಾರಂಟಿಗಳು ಈ ಒಂದು ತಪ್ಪಿನಿಂದ ಸರ್ಕಾರ ಜನವಿರೋಧಿ ಎಂಬ ಪಟ್ಟ ಕಟ್ಟಿಕೊಂಡಂತಾಗುತ್ತದೆ” ಎಂದು ಸಲಹೆ ನೀಡಿದರು.
“ಕೆಇಆರ್‌ಸಿ ಅವೈಜ್ಞಾನಿಕ ರೀತಿಯಲ್ಲಿ ದರ ಏರಿಕೆ ಮಾಡಿದೆ. ಹಿಂದೆ ಮೂರು ಸ್ಲ್ಯಾಬ್‌ಗಳಂತೆ ಯುನಿಟ್‌ವಾರು ದರ ಇದ್ದರೆ, ಈಗ ಕೇವಲ ಎರಡು ಸ್ಲ್ಯಾಬ್‌ಗಳಲ್ಲಿ ವಿದ್ಯುತ್ ದರ ನಿಗದಿ ಮಾಡಲಾಗಿದೆ. ಇದರಿಂದ ಗ್ರಾಹಕರಿಗೆ ಹೊರೆಯಾಗುತ್ತದೆ. ಅಲ್ಲದೆ, ಕೈಗಾರಿಕಾ ವಲಯದಲ್ಲಿ ಈ ದರ ಏರಿಕೆಯಿಂದ ಬೇರೆ ವಸ್ತುಗಳ ದರವೂ ಸಹಜವಾಗಿಯೇ ಏರಿಕೆಯಾಗುತ್ತವೆ. ನೂತನ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೆಇಆರ್‌ಸಿಯ ಜನ ವಿರೋಧಿ ವಿದ್ಯುತ್ ದರ ನೀತಿಯನ್ನು ರದ್ದುಪಡಿಸಬೇಕು” ಎಂದು ಆಗ್ರಹಿಸಿದರು.
“ಕೆಇಆರ್‌ಸಿ ಸರ್ಕಾರದ ಆದೇಶದಂತೆ ನಡೆಯುವ ಒಂದು ಸಂಸ್ಥೆಯಾಗಿರುವುದರಿಂದ ಸರ್ಕಾರ ಕೆಇಆರ್‌ಸಿಯ ನಿರ್ಧಾರದ ನೆಪ ಹೇಳದೆ ತನ್ನ ದಿಟ್ಟತನವನ್ನು ಪ್ರದರ್ಶಿಸಿ ಕೂಡಲೇ ವಿದ್ಯುತ್ ದರ ಇಳಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಬಬ್ಬೂರು ಗ್ರಾಮದ ಸಂಪರ್ಕ ರಸ್ತೆ ತೆರವುಗೊಳಿಸುವಂತೆ ಆಗ್ರಹ
“ಜೂನ್ ತಿಂಗಳ ವಿದ್ಯುತ್ ಬಿಲ್ ಪಾವತಿಗೆ ಸಂಬಂಧಿಸಿ ಬಹುತೇಕ ಗ್ರಾಹಕರು ಬಿಲ್ ಪಾವತಿಸದೇ ಅತಂತ್ರ ಸ್ಥಿತಿಯಲ್ಲಿದ್ದಾರೆ. ಗ್ರಾಹಕರು ಸರ್ಕಾರ ವಿದ್ಯುತ್ ಬಿಲ್ ಹಿಂಪಡೆಯುವವರೆಗೆ ವಿದ್ಯುತ್ ಬಿಲ್ ಪಾವತಿಸದೇ ಪ್ರತಿಭಟನೆ ವ್ಯಕ್ತಪಡಿಸಬೇಕು. ಇದರಿಂದ ಸರ್ಕಾರಕ್ಕೂ ಜನರ ನೋವು ಗೊತ್ತಾಗುತ್ತದೆ. ಈ ಹಿನ್ನಲೆಯಲ್ಲಿ ಗ್ರಾಹಕರ ಸಭೆ ನಡೆಸಿ ಸರ್ಕಾರಕ್ಕೆ ಒತ್ತಡ ತರಲು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ, ನಿರ್ಧರಿಸಿದೆ” ಎಂದು ತಿಳಿಸಿದರು.
“ಈ ವಿಷಯಕ್ಕೆ ಸಂಬಂಧಿಸಿ ಗ್ರಾಹಕರು ಮೊಬೈಲ್ ಸಂಖ್ಯೆ 9342659766ಗೆ ಸಂಪರ್ಕಿಸಿ ಸಮಿತಿ ಹಮ್ಮಿಕೊಂಡಿರುವ ಮುಂದಿನ ರೂಪುರೇಷೆಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಸಂಘಟಿತವಾಗಿ ಸರ್ಕಾರಕ್ಕೆ ಒತ್ತಡ ತರಲು ವಿನಂತಿಸುತ್ತದೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.