ಸಹಕಾರ ಸಂಘಗಳ ಕಾಯ್ದೆ-1959 ಮತ್ತು ನಿಯಮಾವಳಿಗಳು-1960ನ್ನು ಸಹಕಾರ ಅಧಿಕಾರಿಗಳು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮೂಲಕ ಜನತೆಗೆ ನ್ಯಾಯಯುತ ಸೇವೆ ಒದಗಿಸಬೇಕು ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.
ಕಲಬುರಗಿಯಲ್ಲಿ ನಡೆದ ಪ್ರಾಂತೀಯ ಮಟ್ಟದ ಸಹಕಾರ ದಾವೆ ಮತ್ತು ಅಮಲ್ದಾರಿ ಪ್ರಕರಣಗಳ ಕಾರ್ಯಾಗಾರ ಉದ್ಫಾಟಿಸಿ ಅವರು ಮಾತನಾಡಿದರು. “ಪರಿಪೂರ್ಣ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವು ಸಹಕಾರ ಅಧಿಕಾರಿಗಳಿಗೆ ಅನುಕೂಲಕರವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಕಲಿಯುವುದಕ್ಕೆ ಅಂತ್ಯವಿಲ್ಲವೆಂದು ಭಾವಿಸಿದ್ದೇನೆ. ಕಲಿಕೆ ಒಂದು ನಿರಂತರ ಪ್ರಕಿಯೆಯಾಗಿದೆ. ಈ ನಿಟ್ಟಿನಲ್ಲಿ ಕಾರ್ಯಾಗಾರವನ್ನು ಸದುಪಯಗೋಗ ಪಡಿಸಿಕೊಳ್ಳಬೇಕು. ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಆದೇಶಗಳನ್ನು ಕ್ರೂಢೀಕರಿಸಿ ವಿತರಿಸಲಾಗುತ್ತದೆ. ಆದಿಕಾರಿಗಳು ಅವುಗಳನ್ನು ಅಧ್ಯಯನ ಮಾಡಬೇಕು” ಎಂದು ತಿಳಿಸಿದರು.
ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್ ಡಾ. ರಾಜೇಂದ್ರ ಮಾತನಾಡಿ, “ಕಲಬುರಗಿ ಸೇರಿ ಎರಡು ವಿಭಾಗಗಳಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನದಲ್ಲಿ ಇನ್ನೆರಡು ವಿಭಾಗಗಳಲ್ಲಿ ಕಾರ್ಯಾಗಾರ ನಡೆಸಲಾಗುವುದು” ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಅಪರ ನಿಬಂಧಕಿ ಆಶಾ, ಬಾಲಶೇಖರ, ಲಿಂಗರಾಜು, ಜಂಟಿ ನಿಬಂಧಕರುಗಳಾದ ಮಹೇಶ, ಕಲ್ಲಪ್ಪ ಒಬಣಗೋಳ, ಜಯಪ್ರಕಾಶ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎಂ.ಡಿ.ನರಸಿಂಹಮೂರ್ತಿ, ಆಪ್ತ ಕಾರ್ಯದರ್ಶಿ ವೆಂಕಟೇಶ ಸೇರಿದಂತೆ ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.