ಅಂಬೇಡ್ಕರ್ ಯುವ ಸೇನೆ ಜೇವರ್ಗಿ ತಾಲೂಕು ಅಧ್ಯಕ್ಷರಾದ ರವೀಂದ್ರ ನಾಟೆಕರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಅನುದಾನದ ಹಣದಲ್ಲಿ ಅವ್ಯವಹಾರ ನಡೆಸಿದ್ದ ಆರೋಪದ ಮೇಲೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಹರವಾಳ ಗ್ರಾ.ಪಂ ಪಿಡಿಒ ಅವರನ್ನು ಅಮಾನತು ಮಾಡಲಾಗಿದೆ.
ಜೇವರ್ಗಿ ತಾಲೂಕು ಹರವಾಳ ಗ್ರಾ.ಪಂ ಹಿಂದಿನ ಪಿಡಿಒ ಗಂಗಾಧರ್ ರವರು 15ನೇ ಹಣಕಾಸು ಯೋಜನೆಯ ಅನುದಾನ ದುರ್ಬಳಕೆ ಮಾಡಿ ಭಾರೀ ಅವ್ಯವಹಾರ ಮಾಡಿರುತ್ತಾರೆಂದು ಅಂಬೇಡ್ಕರ್ ಯುವ ಸೇನೆ ಜೇವರ್ಗಿ ತಾಲೂಕು ಅಧ್ಯಕ್ಷ ರವೀಂದ್ರ ನಾಟೆಕರ್ ಅವರು ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
15ನೇ ಹಣಕಾಸು ಯೋಜನೆಯಲ್ಲಿ ಭಾರೀ ಅವ್ಯವಹಾರ ಮಾಡಿದ್ದು, ಕಾಮಗಾರಿಯನ್ನು ಕೈಗೊಳ್ಳದೆ ರಶೀದಿ ಸೃಷ್ಟಿ ಮಾಡಿ ಅನುದಾನ ಲಪಟಾಯಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ದೂರಿನ ತನಿಖೆ ಕೈಗೊಂಡ ಅಧಿಕಾರಿಗಳು, ಪಿಡಿಒ ಬಳಿ ದೂರಿನ ಕುರಿತು ವಿಚಾರಿಸಿದರೆ ಬೇರೆ ಬೇರೆ ನೆಪವೊಡ್ಡಿ ತನಿಖೆಯಿಂದ ತಪ್ಪಿಸಿಕೊಳ್ಳುತ್ತಿದ್ದರು.

ನಂತರ ದೂರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳೊಂದಿಗೆ ಖುದ್ದಾಗಿ ಹಾಜರಾಗಲು ಹಾಗೂ ತನಿಖೆಗೆ ಸಹಕರಿಸಲು ತಿಳಿಸಲಾಗಿತ್ತು. ಅನೇಕ ಬಾರಿ ದಾಖಲೆ ಸಲ್ಲಿಸುವಂತೆ ತಿಳಿಸಿದ್ದರೂ ಕೂಡ ತನಿಖಾಧಿಕಾರಿಗಳಿಗೆ ಸ್ಪಂದಿಸಿರುವುದಿಲ್ಲ.
ದಾಖಲೆ ಸಲ್ಲಿಸಲು ಹಿಂಜರಿಯುತ್ತಿದ್ದ ಪಿಡಿಒ ಗಂಗಾಧರ್ ಕಾಮಗಾರಿಯನ್ನು ಕೈಗೊಳ್ಳದೆ ಹಾಗೂ ಪರಿಕರಗಳನ್ನು ಖರೀದಿಸದೆ ರಶೀದಿ ಸೃಷ್ಟಿ ಮಾಡಿ ಭಾರೀ ಅವ್ಯವಹಾರ ಮಾಡಲಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ರೇವಣಸಿದ್ಧ ರವರು ಜಿಲ್ಲಾ ಪಂಚಾಯತಿಗೆ ವರದಿ ಸಲ್ಲಿಸಿದ್ದರು.
ಕಾರ್ಯನಿರ್ವಾಹಕ ಅಧಿಕಾರಿಗಳ ವರದಿ ಆಧರಿಸಿ ಜಿಲ್ಲಾ ಪಂಚಾಯತ್ ಕಲಬುರಗಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭಂವಾರ ಸಿಂಗ್ ಮೀನಾ ರವರು ಹರವಾಳ ಪಿಡಿಒ ಗಂಗಾಧರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ವರದಿ: ಮಿಲಿಂದ್ ಸಾಗರ್,
ಸಿಟಿಜನ್ ಜರ್ನಲಿಸ್ಟ್
