ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರೆ ಯೋಜನೆ (ಮನರೇಗಾ) ಅಡಿಯಲ್ಲಿ ಕೆಲಸ ಕೊಡಬೇಕು ಹಾಗೂ ಇನ್ನಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜೇವರ್ಗಿ ತಾಲ್ಲೂಕಿನ ಹರನೂರ ಗ್ರಾಮ ಪಂಚಾಯತ್ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಸೋಮವಾರ ತಲೆ ಮೇಲೆ ಕಲ್ಲು ಹೊತ್ತು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಸುಭಾಷ ಹೊಸಮನಿ ಮಾತನಾಡಿ, ʼಕಳೆದ ಒಂದು ವಾರದಿಂದ ಹರನೂರ ಗ್ರಾಮ ಪಂಚಾಯಿತಿ ಎದುರು ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಧರಣಿ ನಡೆಸಲಾಗುತ್ತಿದೆ. ಧರಣಿ ಸ್ಥಳಕ್ಕೆ ತಾ.ಪಂ. ಇಒ ಆಗಲಿ ಅಥವಾ ಜನಪ್ರತಿನಿಧಿಗಳಾಗಲಿ ಭೇಟಿ ನೀಡಿ ರೈತರ, ಕೃಷಿ ಕೂಲಿಕಾರ್ಮಿಕರ ಸಮಸ್ಯೆ ಆಲಿಸುವ ಕೆಲಸ ಮಾಡಿಲ್ಲ. ಹೀಗಾಗಿ ತಲೆ ಮೇಲೆ ಕಲ್ಲು ಹೊತ್ತು ವಿನೂತನವಾಗಿ ಪ್ರತಿಭಟನೆ ನಡೆಸಲಾಗುತ್ತಿದೆʼ ಎಂದು ಹೇಳಿದರು.
ʼಮುಂಗಾರು ಬಿತ್ತನೆಗೆ ರೈತರಿಗೆ ಬೇಕಾಗಿರುವ ಬೀಜ ಗೊಬ್ಬರ ಸಮರ್ಪಕವಾಗಿ ವಿತರಿಸಬೇಕು. ಕಳಪೆ ಬಿತ್ತನೆ ಬೀಜ, ಗೊಬ್ಬರ ಮಾರಾಟ ಮಾಡುವುದನ್ನು ತಡೆಗಟ್ಟಬೇಕು. ಬೀಜ, ಗೊಬ್ಬರದ ಅಭಾವ ಸೃಷ್ಟಿ ಮಾಡಿ ಬೆಲೆ ಏರಿಸುವುದನ್ನು ತಡೆಗಟ್ಟಬೇಕು. ಎರಡು ತಿಂಗಳಿಂದ ಬಾಕಿ ಇರುವ ಉದ್ಯೋಗ ಖಾತ್ರಿ ಕೂಲಿ ಹಣವನ್ನು ಬಿಡುಗಡೆಗೊಳಿಸಬೇಕು ಹಾಗೂ ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು. ನೆಟೆ ರೋಗದಿಂದ ಹಾಳಾದ ತೊಗರಿ ಬೆಳೆಗೆ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು’ ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ʼಮಳೆ-ಗಾಳಿಯನ್ನು ಲೆಕ್ಕಿಸದೇ ಹೋರಾಟ ನಡೆಸುತ್ತಿದ್ದರೂ ರೈತಪರ ಹೋರಾಟವನ್ನು ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕೂಡಲೇ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೇ ತಾಲ್ಲೂಕಿನಾದ್ಯಂತ ಉಗ್ರವಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಇದನ್ನೂ ಓದಿ : ಕಲಬುರಗಿ | ಆನ್‌ಲೈನ್ ಗೇಮಿಂಗ್ : ಸಾಲ ತೀರಿಸಲಾಗದೆ ವ್ಯಕ್ತಿ ಆತ್ಮಹತ್ಯೆ
ಸಂಘದ ಪ್ರಮುಖರಾದ ರೇವುನಾಯಕ್ ಜಾಧವ್, ಮಲ್ಕಪ್ಪ ಹರನೂರ್, ಸಕ್ರೆಪ್ಪ ಮ್ಯಾಗೇರಿ, ಉಸ್ಮಾನ ಅಲಿ ಮುಜಾವರ್, ಭೀಮರಾಯ ದಾಸರ, ಮಲ್ಕಪ್ಪ ಮ್ಯಾಗೇರಿ, ಶ್ರೀಕಾಂತ ದಾಸರ್, ಈರಣ್ಣ, ರಾಜು ಸಾಥಖೇಡ ಬಸಮ್ಮ ಮ್ಯಾಗೇರಿ ಮತ್ತಿತರರಿದ್ದರು.