ಮಹಿಳೆಯರಿಗೆ ಸಮಾನತೆ ಮತ್ತು ಸ್ವಾತಂತ್ರ್ಯ ಕಲ್ಪಿಸದ ಯಾವುದೇ ಒಂದು ಸಮಾಜವು ನಾಗರಿಕ ಸಮಾಜ ಎನಿಸಿಕೊಳ್ಳಲಾರದೆಂದು ಡಾ. ಬಿ.ಆರ್ ಅಂಬೇಡ್ಕರ್ ಅಂದೇ ಹೇಳಿದ್ದರು. ಆದರೆ, ಇಂದಿಗೂ ಹೆಣ್ಣು ಮಕ್ಕಳಿಗೆ ಸ್ಥಾನಮಾನ ಸಿಗುತ್ತಿಲ್ಲ ಎಂದು ಪ್ರಬುದ್ಧ ಭಾರತ ಸಂಘರ್ಷ ಸಮಿತಿಯ ಸಂಚಾಲಕಿ ಅಶ್ವಿನಿ ಮದನಕರ್ ಹೇಳಿದರು.
ಕಲಬುರಗಿ ಜಿಲ್ಲೆಯಲ್ಲಿ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಕೃತ್ಯವನ್ನು ಖಂಡಿಸಿ ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ದೇಶವನ್ನೇ ಬೆಚ್ಚಿ ಬೀಳಿಸಿದ ದೆಹಲಿಯ ನಿರ್ಭಯ ಪ್ರಕರಣ, ಅದೇ ಸಮಯದಲ್ಲಿ ಧರ್ಮಸ್ಥಳದಲ್ಲಿ ನಡೆದ 17 ವರ್ಷದ ಬಾಲಕಿ ಸೌಜನ್ಯ ಮೇಲಿನ ಅತ್ಯಾಚಾರ-ಕೊಲೆ, ಬಿಜಾಪುರದ ಹೃದಯಭಾಗದಲ್ಲಿ ನಡೆದ ದಾನಮ್ಮಳ ಭೀಕರ ಅತ್ಯಚಾರ ಮತ್ತು ಇತ್ತೀಚಿಗೆ ಆಳಂದ ತಾಲೂಕಿನಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಬೆಳಕಿಗೆ ಬಂದರೂ ಕೂಡ, ಸೌಜನ್ಯಳಿಂದ ಹಿಡಿದು ದಾನಮ್ಮಳವರೆಗೂ ಯಾವುದೇ ಪ್ರಕರಣದಲ್ಲಿ ಇನ್ನೂ ನ್ಯಾಯ ದೊರೆತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಪ್ರಬುದ್ಧ ಭಾರತ ಸಂಘರ್ಷ ಸಮಿತಿ ಮತ್ತು ಅತ್ಯಾಚಾರ ವಿರೋಧಿ ಆಂದೋಲನ ಬಳಗದ ನಿಯೋಗ ಮಂಗಳವಾರ ಬಾಲಕಿಯ ಮನೆಗೆ ಭೇಟಿ ನೀಡಿತ್ತು. ಕುಟುಂಬಸ್ಥರ ಆಕ್ರಂದನ ಕೇಳಿ, ಸಾಂತ್ವನ ಹೇಳಿತು” ಎಂದರು.
“ವಚನ ಓದಿನಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದ ಬಾಲಕಿ, ವಚನ ಪುಸ್ತಕ ತರಲು ತನ್ನ ಪಕ್ಕದ ಊರಿನ ದೊಡ್ಡಮ್ಮನ ಮನೆಗೆ ಹೋಗುವಾಗ, ವಿಕೃತ ಕಾಮುಕರು ಅತ್ಯಾಚಾರ ಎಸಗಿ, ಹತ್ಯೆ ಮಾಡಿ ಬಾವಿಗೆ ಬಿಸಾಡಿದ್ದಾರೆ” ಎಂದು ಹೇಳಿದರು.
“ಆರೋಪಿಯು ಕಬ್ಬಿನ ಗದ್ದೆಯಲ್ಲಿ ಆ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ. ಆ ಕಾಮುಕ ಈ ಹಿಂದೆಯೇ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಅದೇ ಬಾವಿಯಲ್ಲಿ ಎಸೆದಿದ್ದ ಎಂದು ತಿಳಿದುಬಂದಿದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಶಾಲೆಗೆ ಹೋಗಲು 1 ಕಿ.ಮೀ ಕಾಲು ದಾರಿಗಳು ಇರುತ್ತವೆ. ಅಂತಹ ಮಾರ್ಗಮಧ್ಯೆ ಮಕ್ಕಳ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ” ಎಂದರು.
“ಅತ್ಯಾಚಾರವಾಗಿ ಬದುಕುಳಿದ ಮಕ್ಕಳೂ ಕೂಡ ತಮ್ಮ ಮೇಲಿನ ದೌರ್ಜನ್ಯದ ಕುರಿತು ಮನೆಯಲ್ಲಿ ಹೇಳುವುದಿಲ್ಲ. ಶಾಲೆಗೆ ಹೋಗುವ ಮಕ್ಕಳಿಗೆ ವಿಶೇಷ ರಕ್ಷಣೆ ಒದಗಿಸಬೇಕು. ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ಮಾಡಿ, ಅಪರಾಧಿಗಳಿಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಾಲಕಿ ಮೇಲೆ ಅತ್ಯಾಚಾರ – ಕೊಲೆ; ಕಾಮುಕ ಹಂತಕರ ಬಂಧನಕ್ಕೆ ಆಗ್ರಹ
“ಅತ್ಯಾಚಾರಕ್ಕೊಳಗಾದ ಬಾಲಕಿ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಕೊಡಬೇಕು. ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಬೇಕು. ಹಾಗೆಯೇ ಧರ್ಮಸ್ಥಳದ ಸೌರ್ಜನ್ಯ ಮತ್ತು ವಿಜಯಪುರದ ದಾನಮ್ಮಳ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು. ಎಸ್‌ಐಟಿ ರಚಿಸಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಬುದ್ಧ ಭಾರತ ಸಂಘರ್ಷ ಸಮಿತಿ ಸಂಚಾಲಕಿ ಭವಾನಿ ಪ್ರಸಾದ್, ದಿಲೀಪಕುಮಾರ ಕಾಯನಕರ್, ಪ್ರಗತಿಪರ ಮಹಿಳಾ ಸಂಘದ ಅಧ್ಯಕ್ಷೆ ಮಹಾದೇವಿ ಎಂ. ಸಜ್ಜನ ಇದ್ದರು.