ವಿಜಯಪುರದಲ್ಲಿ ಹಲವು ರೈತರ ಜಮೀನಿನ ಉತಾರದಲ್ಲಿ ವಕ್ಫ್ ಅಸ್ತಿ ಎಂಬುದಾಗಿ ಸೇರಿದ್ದರೆ, ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಗಾ ಹೋಬಳಿ ಸಾವಳೇಶ್ವರ ಗ್ರಾಮದ ದೇವಸ್ಥಾನದ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂಬುದಾಗಿ ನಮೂದಾಗಿದೆ. ಇದಕ್ಕೆ ಸ್ಥಳೀಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘ ಕಾರ್ಯಧ್ಯಕ್ಷ ಕರೆಪ್ಪ ಕರಗೊಂಡ ಪತ್ರಿಕೆ ಹೇಳಿಕೆ ನೀಡಿದ್ದು, “ಸಾವಳೇಶ್ವರ ಗ್ರಾಮದ ಸರ್ವೇ ನಂಬರ್ 2 ರಲ್ಲಿ 1.34 ಗುಂಟೆ ಜಾಗವನ್ನು ಹಿಂದೂ ಬೀರದೇವರ ದೇವಸ್ಥಾನನಕ್ಕೆಂದು ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಈ ಜಾಗ ತಮ್ಮದೆಂದು ವಾದಿಸಿದ್ದ ವಕ್ಫ್ ಮಂಡಳಿ, ಕಂದಾಯ ಅಧಿಕಾರಿಗಳ ಸಹಾಯದಿಂದ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿಯೆಂದು ನಮೂದಿಸಿದೆ. ಇದರಿಂದ ಗ್ರಾಮದ ರೈತರಲ್ಲಿ ಗೊಂದಲ ಮತ್ತು ಆಕ್ರೋಶ, ಸೃಷ್ಟಿಯಾಗಿದೆ” ಎಂದು ತಿಳಿದರು.

“ಸಾವಳೇಶ್ವರ ಗ್ರಾಮದ ಹಿಂದೂ ಸಮುದಾಯಕ್ಕೆ ಒಂದೇ ದೇವಸ್ಥಾನ. ವಕ್ಫ್ ಆಸ್ತಿ ಎಂಬುದಾಗಿ ಕಂದಾಯ ದಾಖಲೆಗಳು ಬದಲಾವಣೆಯಾಗಿವೆ” ಎಂದರು.
“ಯಾವುದೇ ನೋಟಿಸ್ ನೀಡದೇ, ಆಕ್ಷೇಪಣೆಗೆ ಕಾಲಾವಕಾಶವನ್ನೂ ನೀಡದೆ, ಹಿಂದೂ ದೇವಸ್ಥಾನದ ಪಹಣಿಯ ಹಕ್ಕಿನ ಕಾಲಂನಲ್ಲಿ ವಕ್ಫ್ ಆಸ್ತಿಯೆಂದು ಸೇರಿಸಲಾಗಿದೆ. ಇತ್ತೀಚೆಗೆ ಪಹಣಿ ಪರಿಶೀಲನೆ ಸಂದರ್ಭದಲ್ಲಿ ಇದು ಗ್ರಾಮಸ್ಥರ ಗಮನಕ್ಕೆ ಬಂದಿದೆ” ಎಂದು ತಿಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಒಳಮೀಸಲಾತಿ ಜಾರಿಗೆ ಮೂರು ತಿಂಗಳ ಕಾಲಾವಕಾಶ; ರವಿ ಬೆಳಮಗಿ ಖಂಡನೆ
“ಸವಳೇಶ್ವರ ಗ್ರಾಮದ ದೇವಸ್ಥಾನದ ಪಹಣಿಯಲ್ಲಿ ʼವಕ್ಫ್ ಆಸ್ತಿʼಯೆಂದು ಸೇರಿರುವುದು, ಗ್ರಾಮದ ದೇವಸ್ಥಾನದ ಭೂಮಿಯಲ್ಲಿ ವಕ್ಫ್ ಹೆಸರು ದಾಖಲಾಗಿರುವ ಸಂಗತಿ ಪ್ರಮುಖವಾಗಿ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಸಾಮಾಜಿಕ ಜಾಲತಾಣಗಳಲ್ಲೂ, ನಾಲ್ಕು ಜನ ಸೇರಿದಲ್ಲಿ ಈ ವಿಷಯ ಚರ್ಚೆಗೆ ಬರುತ್ತಿದೆ” ಎಂದು ಹೇಳಿದರು.
“ಈ ಮಧ್ಯೆ ವಿವಿಧ ಗ್ರಾಮಗಳ ಜನರು ತಮ್ಮ ಸ್ವಂತ ಆಸ್ತಿ, ಊರಿನ ದೇವಸ್ಥಾನದ ಜಾಗದ ಪಹಣಿ ಪತ್ರಗಳಲ್ಲಿ ವಕ್ಫ್ ಹೆಸರು ನುಸುಳಿದೆಯೆ ಎಂದು ಪರಿಶೀಲಿಸಲು ಮುಂದಾಗಿದ್ದಾರೆ” ಎಂದರು.