- ಎಸ್‌ಡಿಪಿಐ ಮುಖಂಡ ಮೋಹಿಯುದ್ದಿನ್ ಇನಾಂದಾರ ಘೋಷಣೆ
- 10 ಬೇಡಿಕೆಗಳನ್ನು ಇಟ್ಟು ಬೆಂಬಲ ಸೂಚಿಸಿದ ಹೋರಾಟಗಾರ
ಜೇವರ್ಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯ್ ಸಿಂಗ್‌ಗೆ ಎಸ್‌ಡಿಪಿಐ ಮುಖಂಡರು ಬೆಂಬಲ ಘೋಷಿಸಿದ್ದಾರೆ. ಚುನಾವಣೆಯಲ್ಲಿ ಕೋಮುವಾದಿ ಪಕ್ಷವನ್ನು ದೂರವಿಡುವ ಉದ್ದೇಶದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವುದಾಗಿ ಪಣ ತೊಟ್ಟಿದ್ದಾರೆ.
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಯಡ್ರಾಮಿ ಗ್ರಾಮದ ಸಾಮಾಜಿಕ ಹೋರಾಟಗಾರ, ನ್ಯಾಯವಾದಿ ಮೋಹಿಯುದ್ದಿನ್ ಇನಾಂದಾರ ಪತ್ರಿಕಾ ಗೋಷ್ಠಿ ನಡೆಸಿದ್ದಾರೆ. “ಮೇ. 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜೇವರ್ಗಿ ಮತ್ತು ಯಡ್ರಾಮಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಸ್ವತಂತ್ರವಾಗಿ ಮತ್ತು ಷರತ್ತುಬದ್ಧವಾಗಿ ಬೆಂಬಲ ನೀಡುತ್ತಿದ್ದೇವೆ” ಎಂದು ಘೋಷಣೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕಲಬುರಗಿ | ಜಿಲ್ಲೆಗೆ ರಾಹುಲ್ ಗಾಂಧಿ ಭೇಟಿ; ಜಿಲ್ಲಾ ಕಾಂಗ್ರೆಸ್ ತುರ್ತು ಪತ್ರಿಕಾಗೋಷ್ಠಿ
“ಜೇವರ್ಗಿ ತಾಲೂಕಿನ ಜನತೆಗೆ ಗೊತ್ತಿರುವಂತೆ ನಾನು 8 ವರ್ಷದಿಂದ ಜೇವರ್ಗಿ, ಯಡ್ರಾಮಿ ತಾಲೂಕಿನ ಅಭಿವೃದ್ಧಿಗೆ ಮತ್ತು ಶಿಕ್ಷಣಕ್ಕೆ ನ್ಯಾಯದ ಪರವಾಗಿ, ಅನ್ಯಾಯದ ವಿರುದ್ಧ ಹೋರಾಟಗಳು, ಚಳುವಳಿಗಳು ಹಾಗೂ ಸಾಮಾಜಿಕ ಸೇವೆ ಮಾಡುತ್ತ ಬಂದಿದ್ದೇನೆ” ಎಂದು ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಎದುರು ಎಸ್‌ಡಿಪಿಐ ಇಟ್ಟಿರುವ ಷರತ್ತುಗಳು
- ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಪುರಸಭೆ ಚುನಾವಣೆಯಲ್ಲಿ ನಮ್ಮ ಸಮುದಾಯದವರಿಗೆ ಹೆಚ್ಚಿನ ಆದ್ಯತೆ ಕೊಟ್ಟು ಗೆಲ್ಲಿಸಿ ತರಬೇಕು. ಮುಖ್ಯವಾಗಿ ಅಲ್ಪಸಂಖ್ಯಾತರನ್ನು ರಾಜಕೀಯವಾಗಿ ಬೆಳಸಬೇಕು.
- ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನಲ್ಲಿರುವ ಸರ್ಕಾರಿ ಅಲ್ಪಸಂಖ್ಯಾತ ವಸತಿ ಶಾಲೆಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಹಾಗೂ ಇವುಗಳನ್ನು ಹೆಚ್ಚಾಗಿ ಅಭಿವೃದ್ಧಿಪಡಿಸಬೇಕು.
- ಅಲ್ಪಸಂಖ್ಯಾತರಿಗೆ ಸಂಬಂಧಪಟ್ಟಂತೆ ದರ್ಗಾ ಆಶೂರಖಾನ ಮಸಿದಿ, ಈದ್ಗಾ ಮತ್ತು ಖಬರಸ್ತಾನಗಳ ದುರಸ್ತಿ ಮಾಡಲು ಹೆಚ್ಚಿನ ಅನುದಾನ ಕೊಡಬೇಕು.
- ಅಲ್ಪಸಂಖ್ಯಾತರ ಯಾವುದೇ ಕಾರ್ಯಾಲಯದಲ್ಲಿ ಯಾವುದೇ ಕೆಲಸಗಳು ಇದ್ದರೆ ಕಾನೂನು ರೀತಿಯಲ್ಲಿ ಸಹಕಾರ ಮಾಡಬೇಕು.
- ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಜೇವರ್ಗಿ ಮತ್ತು ಯಡ್ರಾಮಿಯಿಂದ ನಿಗಮ ಮಂಡಳಿಗಳಲ್ಲಿ ಕೂಡ ಅಲ್ಪಸಂಖ್ಯಾತರಿಗೆ ಒಂದುಸ್ಥಾನ ಕೊಡಬೇಕು. ಇನ್ನಿತರ ಅನೇಕ ಷರತ್ತುಗಳು ಇಟ್ಟಿದ್ದೇವೆ ನಮ್ಮ ಷರತ್ತುಗಳಿಗೆ ಒಪ್ಪಿಕೊಂಡಿದ್ದಾರೆ.
- ತಮ್ಮ ಸರ್ಕಾರ ಬಂದಲ್ಲಿ ಅಮಾಯಕರ ಮೇಲೆ ಆದಂತಹ ಸುಳ್ಳು ಪ್ರಕರಣಗಳು ಮತ್ತು ರೌಡಿಶೀಟರಗಳು ಹಿಂಪಡೆಯಬೇಕು.
“ಈ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೇಳಿಕೊಂಡಿದ್ದು, ಇದಕ್ಕೆ ಡಾ. ಅಜಯ್ ಸಿಂಗ್ ಒಪ್ಪಿಕೊಂಡಿದ್ದಾರೆ. ಆದ್ದರಿಂದ ನಾವು ಸ್ವತಂತ್ರವಾಗಿ ಷರತ್ತುಬದ್ಧವಾಗಿ ಕಾಂಗ್ರೆಸ್‌ಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ” ಎಂದು ಹೇಳಿದರು.
“ನಾನು ಮತ್ತು ನನ್ನ ಬೆಂಗಲಿಗರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುತ್ತಿಲ್ಲ. ಕೇವಲ ಚುನಾವಣೆ ನಿಮಿತ್ತವಾಗಿ ಬೆಂಬಲ ಇರುತ್ತದೆ. ಒಂದುವೇಳೆ ಡಾ. ಅಜಯ್ ಸಿಂಗ್ ಚುನಾವಣೆ ಮುಗಿದ ನಂತರ ಅಲ್ಪಸಂಖ್ಯಾತರನ್ನು ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಕಡೆಗಣಿಸಿದರೆ ನಾನು ಹಿಂದೆ ಕೂಡ ಅಜಯ್ ಸಿಂಗ್ ಅವರಿಗೆ ಟೀಕೆ ಟಿಪ್ಪಣಿಗಳು ಮತ್ತು ವಿರೋಧ ಮಾಡಿದ ನನ್ನ ಇತಿಹಾಸ ಇದೆ. ಮುಂದಿನ ದಿನಗಳಲ್ಲಿ ಕೂಡ ಜನರ ಮತ್ತು ಅಭಿವೃದ್ಧಿಯ ಕಾರ್ಯಗಳು ಮಾಡಿಲ್ಲ ಅಂದರೆ ನಾನು ವಿರೋಧ ಮಾಡುತ್ತೇನೆ” ಎಂದು ಎಚ್ಚರಿಸಿದರು.
“ನನ್ನ ಬೆಂಬಲಿಗರ, ಅಭಿಮಾನಿಗಳ, ಹಿತೈಷಿಗಳ ಜೊತೆ ಸಭೆಮಾಡಿ, ಚರ್ಚೆಮಾಡಿ ಅವರ ಅನಿಸಿಕೆಗಳು ಹಾಗೂ ಒಪ್ಪಿಗೆ ಮೇರೆಗೆ ಕೋಮುವಾದಿ, ಜಾತಿವಾದಿ, ಅಲ್ಪಸಂಖ್ಯಾತರ ವಿರೋಧಿ ಬಿಜೆಪಿಗೆ ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಲಾಗಿದೆ. ನನ್ನ ವಿರುದ್ಧ ಕೆಲವು ಊಹಾ ಪೋಹಗಳು, ಅಪ ಪ್ರಚಾರಗಳು, ಸುಳ್ಳು ಸುದ್ದಿಗಳು ಕೇಳಿ ಬರುತ್ತಿವೆ. ಅದಕ್ಕೆ ನಾನು ವೇದಿಕೆಯ ಮೇಲೆ ನೇರವಾಗಿ ಉತ್ತರ ಕೊಡುತ್ತೇನೆ. ಮುಂದಿನ ದಿನಗಳಲ್ಲಿ ಚುನಾವಣೆ ನಂತರವೂ ಕೂಡ ನಾನು ನ್ಯಾಯದ ಪರ, ಅನ್ಯಾಯದ ವಿರುದ್ಧ, ಅಭಿವೃದ್ಧಿಗೆ ಸಂಬಂಧಪಟ್ಟಂತೆ ನಿರಂತರವಾಗಿ ನನ್ನ ಹೋರಾಟ ಮುಂದುವರೆಸುತ್ತೇನೆ“ ಎಂದು ಭರವಸೆ ನೀಡಿದರು.