ಭಾರತವು ಸ್ವಾತಂತ್ರ್ಯಗೊಂಡು 75 ವರ್ಷಗಳ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ರೈತರ, ಕಾರ್ಮಿಕರ ಹಾಗೂ ಜನಸಾಮಾನ್ಯರ ಬದುಕು ಶೋಚನೀಯವಾಗಿದೆ ಎಂದು ಎಸ್‌ಯುಸಿಐ ಸದಸ್ಯರು ಕೆ ರಾಧಾಕೃಷ್ಣ ಪಾಲಿಟ್ ಬ್ಯುರೋ ವಿಷಾಧ ವ್ಯಕ್ತಪಡಿದರು.
ಕಲಬುರಗಿ ನಗರದ ಡಾ. ಎಸ್ ಎಂ ಪಂಡಿತ ರಂಗಮಂದಿರದಲ್ಲಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ನೇತೃತ್ವದಲ್ಲಿ ಮಾರ್ಕ್ಸ್‌ವಾದಿ ಚಿಂತಕ, ತತ್ವಜ್ಞಾನಿ ಹಾಗೂ ಭಾರತ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ ಶಿವದಾಸ ಘೋಷ್ ಜನ್ಮ ಶತಮಾನೋತ್ಸವದಲ್ಲಿ ಅವರು ಮಾತನಾಡಿದರು.
“ನಿರುದ್ಯೋಗ, ಭ್ರಷ್ಟಾಚಾರ, ಕೋಮುವಾದ, ಬಡತನ, ಮಹಿಳೆಯರ ಮೇಲಿನ ಅತ್ಯಾಚಾರಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ನಿತ್ಯ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗುತ್ತಿದೆ. ಸ್ವಾತಂತ್ರ್ಯದ ಬಳಿಕ ಆಳ್ವಿಕೆ ನಡೆಸಿರುವ ಕಾಂಗ್ರೆಸ್, ಜನತಾಪಕ್ಷ, ಬಿಜೆಪಿ ಹಾಗೂ ಇತರ ಪಕ್ಷಗಳು ದೇಶದ ಬಂಡವಾಳಶಾಹಿಗಳ ಸೇವೆ ಮಾಡಿ ಅವರ ಸಂಪತ್ತನ್ನು ಲಕ್ಷಾಂತರ ಕೋಟಿ ರೂಪಾಯಿಗಳಿಗೆ ಹೆಚ್ಚಿಸಿವೆ. ದೇಶದ ಶೇ.62 ರಷ್ಟು ಸಂಪತ್ತು, ಕೇವಲ ಶೇ.1 ರಷ್ಟು ಜನರಲ್ಲಿ ಶೇಖರಣೆಗೊಂಡಿದೆ. ಬಂಡವಾಳಶಾಹಿಗಳಿಗೆ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯಲು ಎಲ್ಲ ನೀತಿಗಳನ್ನು ರೂಪಿಸಲಾಗುತ್ತಿದೆ ಹಾಗೂ ಜನಸಾಮಾನ್ಯರ ಹಿತವನ್ನು ಸಂಪೂರ್ಣವಾಗಿ ಮರೆತಿವೆ” ಎಂದು ಕೆ ರಾಧಾಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.
“ದೇಶದಲ್ಲಿ ಶೋಷಕ ಬಂಡವಾಳಶಾಹಿ ವರ್ಗದ ಬೆಳವಣಿಗೆಗೆ ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಕನಿಷ್ಠ ಮಟ್ಟದ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ವಸತಿ, ಉಚಿತ ಶಿಕ್ಷಣ ಮತ್ತು ಆರೋಗ್ಯ ಹಾಗೂ ಉದ್ಯೋಗಗಳನ್ನು ನೀಡುವಲ್ಲಿ ಸಂಪೂರ್ಣವಾಗಿ ನಿಷ್ಕಾಳಜಿ ತೋರಿಸುತ್ತಿದೆ. ಇಂದಿನ ಎಲ್ಲ ಸಮಸ್ಯೆಗಳಿಗೆ ಬಂಡವಾಳಶಾಹಿ ಪರ ಪಕ್ಷಗಳ ನೀತಿಗಳೇ ಕಾರಣ ಎಂಬ ಸತ್ಯವನ್ನು ದುಡಿಯುವ ವರ್ಗವು ಗ್ರಹಿಸಬೇಕಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಕಲುಷಿತ ನೀರು ಸೇವಿಸಿ 10ಕ್ಕೂ ಅಧಿಕ ಮಂದಿ ಅಸ್ವಸ್ಥ
“ಚುನಾವಣೆ ಮತ್ತು ನಾಯಕರ ಬದಲಾವಣೆಯಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೆಂಬ ಭ್ರಮೆಯಿಂದ ಹೊರಬರಬೇಕು. ಈ ದಿಸೆಯಲ್ಲಿ ಪ್ರಜಾತಾಂತ್ರಿಕ ಚಳವಳಿಗಳನ್ನು ಬೆಳೆಸುತ್ತಾ, ವರ್ಗ ಸಂಘರ್ಷವನ್ನು ತೀವ್ರಗೊಳಿಸುತ್ತಾ, ಅಂತಿಮವಾಗಿ ಶೋಷಣಾರಹಿತ ಸಮಾಜವಾದಿ ವ್ಯವಸ್ಥೆಯನ್ನು ಕಟ್ಟಲು ಕ್ರಾಂತಿಯನ್ನು ನೆರವೇರಿಸಬೇಕು. ಶಿವದಾಸ್ ಘೋಷ್ ಅವರ ಜನ್ಮ ಶತಮಾನೋತ್ಸವದ ಈ ಸಂದರ್ಭದಲ್ಲಿ ದೇಶದ ದುಡಿಯುವ ವರ್ಗ, ವಿಮೋಚನೆಯ ಮಾರ್ಗ ತೋರಿಸಿದ ಶಿವದಾಸ್ ಘೋಷ್‌ರವರ ಚಿಂತನೆಗಳನ್ನು ಅಳವಡಿಸಿಕೊಂಡು ಕಾರ್ಮಿಕ ವರ್ಗದ ಪಕ್ಷ ಎಸ್‌ಯುಸಿಐ(ಸಿ) ಬಲಪಡಿಸಬೇಕು” ಎಂದು ಕರೆ ನೀಡಿದರು.
ಸಂಘಟನೆಯ ರಾಯಚೂರು ಜಿಲ್ಲಾ ಕಾರ್ಯದರ್ಶಿ ಡಾ. ಚಂದ್ರಗಿರೀಶ, ರಾಜ್ಯ ಸೆಕ್ರೇಟರಿ ಸದಸ್ಯರುಗಳಾದ ಟಿ ಎಸ್ ಸುನೀತಕುಮಾರ, ಎಮ್ ಶಶಿಧರ, ಯಾದಗಿರ ಜಿಲ್ಲೆಯ ಕಾರ್ಯದರ್ಶಿ ಕೆ ಸೋಮಶೇಖರ್ ಸೇರಿದಂತೆ ಹಲವು ಜಿಲ್ಲೆಗಳ ಪಕ್ಷದ ಕಾರ್ಯಕರ್ತು ಇದ್ದರು.