ತಮ್ಮ ನೆಚ್ಚಿನ ಶಿಕ್ಷಕನನ್ನು ಅಮಾನತುಗೊಳಿಸಿದ್ದನ್ನು ಖಂಡಿಸಿ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಶಾಲೆಯೊಂದರಲ್ಲಿ ನಡೆದಿದೆ.
ತಾಲೂಕಿನ ಹರನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಮಾದರಿ ಶಾಲೆಯ ಶಿಕ್ಷಕ ವಿಶ್ವೇಶ್ವರಯ್ಯ ಅವರನ್ನು ಶಿಕ್ಷಣ ಇಲಾಖೆ ಅಮಾನತು ಮಾಡಿದೆ. ಇಲಾಖೆಯ ಕ್ರಮವನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿದ್ದಾರೆ.
ಶಿಕ್ಷಕರ ವಿರುದ್ಧ ಕೆಲವರು ಡಿಡಿಪಿಐಗೆ ದೂರು ನೀಡಿದ್ದರು. ಬಳಿಕ, ತನಿಖೆ ನಡೆಸಿದ ಬಿಇಒ ವರದಿ ಸಲ್ಲಿಸಿದ್ದರು. ಅವರ ವರದಿಯನ್ನು ಆಧರಿಸಿ ಎರಡು ದಿನಗಳ ಹಿಂದೆ ಶಿಕ್ಷಕನನ್ನು ಡಿಡಿಪಿಐ ಸಕ್ರೆಪ್ಪಗೌಡ ಅಮಾನತುಗೊಳಿಸಿದ್ದರು.
ಕಳೆದ 24 ವರ್ಷಗಳಿಂದ ತಮ್ಮ ಗ್ರಾಮದ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ವಿಶ್ವೇಸ್ವರಯ್ಯ ಉತ್ತಮ ವ್ಯಕ್ತಿಯಾಗಿದ್ದಾರೆ. ಅವರ ಬಳಿ ಕಲಿತ ಅನೇಕ ವಿದ್ಯಾರ್ಥಿಗಳು ಉತ್ತಮ ವೃತ್ತಿಜೀವನ ನಡೆಸುತ್ತಿದದಾರೆ. ಅವರ ಬಳಿ ಕಲಿತ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಬಗ್ಗೆ ಹೆಮ್ಮೆಪಡುತ್ತಾರೆ,” ಎಂದು ಪೋಷಕರು ಹೇಳಿದ್ದಾರೆ.
ಶಿಕ್ಷಕ ವಿಶ್ವೇಶ್ವರಯ್ಯ ವಿದ್ಯಾರ್ಥಿಗಳಿಗೆ ನೈತಿಕತೆಯನ್ನು ಕಲಿಸುತ್ತಾರೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಶ್ರಮಿಸುತ್ತಾರೆ. ಶಿಕ್ಷಣದ ಜೊತೆಗೆ ಮಕ್ಕಳು ಎಲ್ಲ ಆಯಾಮಗಳಲ್ಲಿ ಬೆಳೆಯಬೇಕು. ನಮ್ಮ ಗುರುಗಳು ನಮಗೆ ಉತ್ತಮ ಮೌಲ್ಯಗಳನ್ನು ಕಲಿಸಿದ್ದರಿಂದ ನಾವು ದೇಶದ ಉತ್ತಮ ಪ್ರಜೆಗಳಾಗಿದ್ದೇವೆ” ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳು ಹೇಳಿದ್ದಾರೆ.
ಅಮಾನತು ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ವಿದ್ಯಾರ್ಥಿಗಳೊಂದಿಗೆ ಎಲ್ಲ ಗ್ರಾಮಸ್ಥರು ಸೋಮವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮಕ್ಕಳು ತರಗತಿ ಬಹಿಷ್ಕರಿಸಿ ಶಾಲಾ ಆವರಣದಲ್ಲಿ ಧರಣಿ ನಡೆಸಿದ್ದರು.
ಶಿಕ್ಷಕನ ವಿರುದ್ಧ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಇತರರು ಡಿಡಿಪಿಐಗೆ ದೂರು ನೀಡಿದ್ದಾರೆ. ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ್ ಕೂಡ ಇದೇ ಗ್ರಾಮದವರಾಗಿದ್ದು, ಕೆಲವರ ಮಾತು ಕೇಳಿ, ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.