ಹಲಕರ್ಟಿ ಗ್ರಾಮಕ್ಕೆ ಅವಶ್ಯಕ ಮೂಲ ಸೌಲಭ್ಯಗಳನ್ನು ಕೂಡಲೇ ಒದಗಿಸುವಂತೆ ಒತ್ತಾಯಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಹಲಕರ್ಟಿ ಕೋಶ ವಾಡಿ ಸ್ಥಳೀಯ ಸಮಿತಿಯಿಂದ ಪ್ರತಿಭಟನೆ ನಡೆಸಿದರು.
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒ ಅವರಿಗೆ ಮನವಿ ಪತ್ರ ಸಲ್ಲಿಸಿದರು.
“ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಹಲಕರ್ಟಿ ಕೋಶವು ಗ್ರಾಮದ ಹಲವು ಜನತೆಯ ವಿವಿಧ ಸಮಸ್ಯೆಗಳನ್ನು ತೆಗೆದುಕೊಂಡು ಹಲವಾರು ಹೋರಾಟಗಳನ್ನು, ಕಾರ್ಯಕ್ರಮಗಳನ್ನು ಸಂಘಟಿಸುತ್ತಾ, ಜನತೆಯ ನೈಜ ಪಕ್ಷವಾಗಿ ಕೆಲಸ ಮಾಡುತ್ತಿದೆ” ಎಂದು ಹೇಳಿದರು.
“ನಮ್ಮ ಪಕ್ಷದ ಸಂಘಟನಾಕಾರರು ಹಾಗೂ ಬೆಂಬಲಿಗರು ಸೇರಿಕೊಂಡು ಗ್ರಾಮದ ಬಡಾವಣೆಗಳ ಹಾಗೂ ಜನರ ಅವಶ್ಯಕ ಮೂಲ ಸೌಕರ್ಯಗಳ ಸಮಸ್ಯೆಗಳ ಬಗ್ಗೆ ನಿಖರವಾಗಿ ಸರ್ವೆ ಮಾಡಿದ್ದೇವೆ. ಈ ಒಂದು ಸರ್ವೆಯಲ್ಲಿ ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವಲ್ಲಿ ಗ್ರಾಮ ಪಂಚಾಯತಿ ಆಡಳಿತದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಗ್ರಾಮದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಾದ ಗ್ರಾಮ ಪಂಚಾಯಿತಿಯು ಜನರ ಸಮಸ್ಯೆಗಳಿಗೆ ಕಿವಿಗೊಡದಿರುವುದು ಖಂಡನೀಯ” ಎಂದರು.
“ಗ್ರಾಮದ ಮಹಿಳೆಯರು, ರೈತರು, ಕಾರ್ಮಿಕರು ಮತ್ತು ಎಲ್ಲ ಸಾರ್ವಜನಿಕರಿಗೆ ಅನುಕೂಲವಾಗುವ ಬೇಡಿಕೆಗಳನ್ನು ಪಟ್ಟಿ ಮಾಡಿ, ನಿಯೋಗದ ಮೂಲಕ ನೂತನ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಪಿಡಿಒ ಅವರ ಗಮನಕ್ಕೆ ತಂದರು ಕೂಡಾ ಯಾವುದೇ ಒಂದು ಬೇಡಿಕೆಯೂ ಈಡೇರಿಲ್ಲ. ಒಂದು ವೇಳೆ ಜನತೆಯ ಈ ನೈಜ ಬೇಡಿಕೆಗಳನ್ನು ಈಡೇರಿಸುವಲ್ಲಿ ಬೇಜವಾಬ್ದಾರಿ ಅಥವಾ ನಿರ್ಲಕ್ಷ್ಯ ತೋರಿದರೆ, ಮುಂದಿನ ದಿನಗಳಲ್ಲಿ ಜನತೆಯನ್ನು ಸಂಘಟಿಸಿ ಗ್ರಾಮ ಪಂಚಾಯಿತಿಗೆ ಫೇರಾವ್, ಹೆದ್ದಾರಿ ತಡೆಯಂತಹ ಉನ್ನತ ಹಂತದ ಪ್ರತಿಭಟನೆಗಳನ್ನು ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
“ಹಲಕರ್ಟಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿಗಾಗಿ ನೀರು ಶುದ್ದೀಕರಣ ಘಟಕ ಸ್ಥಾಪಿಸಬೇಕು. ಸಾಂಕ್ರಾಮಿಕ ರೋಗ-ರುಜಿನಗಳನ್ನು ತಡೆಗಟ್ಟಲು ಕೂಡಲೇ ಚರಂಡಿ ಸ್ವಚ್ಛತೆ, ಫಾಗಿಂಗ್ ಮತ್ತು ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು. ಗ್ರಾಮದ ಹಲವು ಬಡಾವಣೆಗಳಲ್ಲಿ ಕೆಟ್ಟಿರುವ ಹಾಗೂ ಒಡೆದಿರುವ ನೀರಿನ ಪೈಪ್‌ಲೈನ್‌ಗಳನ್ನು ದುರಸ್ತಿಗೊಳಿಸಬೇಕು” ಎಂದು ಆಗ್ರಹಿಸಿದರು.
“ಸುಭಾಷ್ ತಳವಾರ ಮನೆಯ ಹತ್ತಿರ 5ರಿಂದ 6 ವರ್ಷಗಳ ಹಿಂದೆಯೇ ನಿರ್ಮಿಸಿರುವ ಮಹಿಳಾ ಸಾರ್ವಜನಿಕ ಶೌಚಾಲಯವನ್ನು ಬಳಕೆಗೆ ಅನುಕೂಲ ಮಾಡಿಕೊಡಬೇಕು. ಅಂಬೇಡ್ಕರ್ ನಗರಕ್ಕೆ ಮಹಿಳಾ ಸಾರ್ವಜನಿಕ ಶೌಚಾಲಯವನ್ನು ಕೂಡಲೇ ನಿರ್ಮಿಸಬೇಕು. ವಾರ್ಡ್ ನಂ.1ರಲ್ಲಿ ಮಹಿಳಾ ಸಾರ್ವಜನಿಕ ಶೌಚಾಲಯ ಕೂಡಲೇ ನಿರ್ಮಿಸಬೇಕು. ವಾರ್ಡ್ ನಂ.2ರ ನೇತಾಜಿ ಬಡಾವಣೆಯಲ್ಲಿ ಲಾಲಪ್ಪ ಹಡಪದ ಮನೆಯ ಹತ್ತಿರ ಮಹಿಳಾ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಬೇಕು” ಎಂದು ಒತ್ತಾಯಿಸಿದರು.
“ಬುಕ್ಕನವರ ದಿಡ್ಡಿ ಹತ್ತಿರ ಹಾಳಾಗಿರುವ ಮಿನಿ ನೀರಿನ ಟ್ಯಾಂಕನ್ನು ದುರಸ್ತಿಗೊಳಿಸಬೇಕು ಇಲ್ಲವೇ ಹೊಸದಾಗಿ ನಿರ್ಮಿಸಬೇಕು. ಅವಶ್ಯಕವಿರುವ ಕಡೆ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಬೇಕು. ಅಣಿಕೇರಿ ದಾರಿಗೆ ಸೇತುವೆ ನಿರ್ಮಿಸಿ ಮತ್ತು ಸ್ಮಶಾನಕ್ಕೆ ಹೋಗುವುದಕ್ಕಾಗಿ ಹಳ್ಳಕ್ಕೆ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಿಸಬೇಕು” ಎಂದರು.
“ರೈತರ ಹೊಲಗಳಿಗೆ ಹೋಗುವ ಹಣದಿಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ, ರಸ್ತೆಗಳನ್ನು ದುರಸ್ತಿಗೊಳಿಸಬೇಕು. ವೀರಭದ್ರೇಶ್ವರ ದೇವಸ್ಥಾನದಿಂದ ಮುನೇಂದ್ರ ಶಿವಾಚಾರ್ಯ ಮಠದವರೆಗೆ ಸಿ ಸಿ ರಸ್ತೆ ನಿರ್ಮಿಸಬೇಕು. ಗುರೂಜಿ ನಗರಕ್ಕೆ ರಸ್ತೆಯನ್ನು ನಿರ್ಮಿಸಬೇಕು. ಗ್ರಾಮದಲ್ಲಿ ಎಲ್ಲೆಂದರಲ್ಲಿ ಜೋತು ಬಿದ್ದಿರುವ ಜೀವಕ್ಕೆ ಅಪಾಯವಿರುವ ವಿದ್ಯುತ್ ತಂತಿಗಳನ್ನು ದುರಸ್ತಿಗೊಳಿಸಬೇಕು. ಹಲಕರ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಊರಿನ ಹತ್ತಿರ ಎರಡು ಕಡೆ ದಿಣ್ಣೆಗಳನ್ನು ಹಾಕಬೇಕು. ಗ್ರಾಮ ಪಂಚಾಯಿತಿಯ ಸೇವೆಗಳ ವಿವರ ಮತ್ತು ವೆಚ್ಚದ ಪಟ್ಟಿಯನ್ನು ಅಳವಡಿಸಬೇಕು. ಗ್ರಾಮದಲ್ಲಿರುವ ಮಿನಿ ವಾಟರ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ನಾಟಕಗಳು ನಮ್ಮ ಸಂಸ್ಕೃತಿಯ ಕೊಂಡಿ: ರಂಗ ನಿರ್ದೇಶಕ ರಾಜಪ್ಪ ದಳವಾಯಿ
ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದ ವಾಡಿ ಸ್ಥಳೀಯ ಸಮಿತಿ ಸದಸ್ಯರುಗಳಾದ ಆರ್ ಕೆ ವೀರಭದ್ರಪ್ಪ, ಗೌತಮ್ ಪರತೂರಕರ, ಶಿವಕುಮಾರ್ ಆಂದೋಲ, ವೆಂಕಟೇಶ ದೇವದುರ್ಗ, ಗೋವಿಂದ ಯಳವಾರ, ಗೋದಾವರಿ ಕಾಂಬ್ಳೆ, ಸಿದ್ಧಾರ್ಥ ತಿಪ್ಪನೂರು, ದತ್ತು ಹುಡೇಕರ, ಜೈಭೀಮ ದಾಸ್, ಚೌಡಪ್ಪ ಗಂಜಿ, ಹಾಗೂ ಗ್ರಾಮಸ್ಥರುಗಳಾದ ಭಾಗಮ್ಮ ಪರತೂರು, ಮಹಾದೇವಿ ಉಳಗೊಳ, ಸುಶೀಲಮ್ಮ ಚಾಮನೂರು, ರಾಣಮ್ಮ ಮಾವಿನ, ಚಂದರೆಡ್ಡಿ ಧನಕಾಯಿ, ಈರಣ್ಣ ಚಂನೂರು ಸಾಬಣ್ಣ ಸುಣಗಾರ, ವೀರೇಶ ನಾಲವಾರ, ಕರಣಪ್ಪ ಇಸಬಾ, ಅಹಮದ್ ಮಿರ್ಜಾ, ಮಹಾಂತೇಶ ಉಳಗೊಳ ಸೇರಿದಂತೆ ಇತರರು ಇದ್ದರು.
