ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ಶಿಕ್ಷಕರಿಗಾಗಿ ನಿರ್ಮಿಸಲಾಗಿದ್ದ ವಸತಿ ಗೃಹಗಳು ಉದ್ಘಾಟನೆಗೂ ಮುನ್ನವೇ ಪಾಳು ಬಿದ್ದಿದೆ. ಅಲ್ಲದೆ, ಜೂಜು, ಕುಡಿತ ಸೇರಿದಂತೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಸುಸಜ್ಜಿತ ಕಟ್ಟಡವೊಂದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಶಿಕ್ಷಕರಿಗೋಸ್ಕರ ಸರ್ಕಾರ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಈ ಕಟ್ಟಡಗಳನ್ನ ನಿರ್ಮಿಸಿದೆ. ಆದರೆ, ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಈ ರೀತಿ ಉದ್ಘಾಟನೆಯಾಗಾದೆ ಅನಾಥವಾಗಿ ಬಿದ್ದಿರೋದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.
ವಸತಿ ಗೃಹವು ಸರ್ಕಾರಿ ಶಾಲೆಯ ಶಿಕ್ಷಕರ ಕುಟುಂಬಗಳು ವಾಸಿಸಲು ಅವಕಾಶ ಕಲ್ಲಿಸುವ ಸದುದ್ದೇಶದಿಂದ ಈ ಕಟ್ಟಡ ನಿರ್ಮಿಸಲಾಗಿತ್ತು. ಇಲ್ಲಿ ವಾಸಿಸಲು ಎಲ್ಲ ರೀತಿಯ ಮೂಲಭೂತ ಸೌಕರ್ಯವನ್ನು ಸಹ ಒದಗಿಸಲಾಗಿದೆ. ಡಬಲ್ ಬೆಡ್ ರೂಮ್, ಅಡುಗೆ ಕೋಣೆ, ಹಾಲ್, ಶೌಚಾಲಯ ಹೀಗೆ, ವ್ಯವಸ್ಥಿತವಾಗಿ ಮನೆಗಳನ್ನು ನಿರ್ಮಿಸಲಾಗಿದ್ದರೂ ಉದ್ಘಾಟನೆಯಾಗಿಲ್ಲ.
ಜಿಲ್ಲೆಗೆ ವರ್ಗಾವಣೆಯಾಗಿ ಬರುವ ಸರ್ಕಾರಿ ನೌಕರರು ಬಾಡಿಗೆ ಮನೆಗಳಲ್ಲೇ ವಾಸಿಸಬೇಕಾದಂತಹ ಸ್ಥಿತಿ ಎದುರಾಗಿದೆ. ಪ್ರತಿ ತಿಂಗಳು ಮೂರು-ನಾಲ್ಕು ಸಾವಿರ ರೂಪಾಯಿ ಬಾಡಿಗೆ ಪಾವತಿಸಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಜೀವನ ನಡೆಸುತ್ತಿದ್ದಾರೆ. ಸರ್ಕಾರದಿಂದ ವಸತಿ ಗೃಹದ ಸೌಲಭ್ಯ ಇದ್ದರು
ಬಾಡಿಗೆ ಮನೆಗಳಲ್ಲಿ ವಾಸಿಸುವ ಸ್ಥಿತಿ ಇದೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಹಾಗೆ ವಸತಿ ಗೃಹ ಕಣ್ಣೆದುರೇ ಇದ್ದರು ಉಪಯೋಗಕ್ಕೆ ಬಾರದೇ ಇರುವುದು ವಿಷಾದನೀಯ. ಶಿಕ್ಷಣ ಕೊಡುವ ಶಿಕ್ಷಕರ ವಸತಿ ಗೃಹವನ್ನು ಕಿಡಿಗೇಡಿಗಳು ಕುಡಿದ ಅಮಲಿನಲ್ಲಿ ಕಟ್ಟಡದ ಕಿಟಕಿ ಬಾಗಿಲು ಮುರಿದು ಹಾಕಿದ್ದಾರೆ. ಅಲ್ಲದೆ ಜೂಜು ಅಡ್ಡೆ ಮಾಡಿಕೊಂಡಿದ್ದು ಅನೈತಿಕ ಚಟುವಟಿಕೆ ನಡೆಸಲು ಸರ್ಕಾರವೆ ಎಡೆ ಮಾಡಿಕೊಟ್ಟತ್ತಾಗಿದೆ. ಎರಡು ಅಂತಸ್ಥಿನ ಈ ಕಟ್ಟದ ಸೂಕ್ತ ನಿರ್ವಹಣೆ ಇಲ್ಲದೆ ಗಿಡ-ಗಂಟಿ ಬೆಳೆದು ಹಾಳು ಕೊಂಪೆಯಂತ್ತಾಗಿದೆ.
ಶಿಕ್ಷಕರ ವಸತಿ ಗೃಹ ಸಂಪೂರ್ಣ ಈ ರೀತಿ ಉದ್ಘಾಟನೆ ಮುನ್ನಾ ಪಾಳು ಬಿದಿರುವುದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ದಿವ್ಯ ನಿರ್ಲಕ್ಷವಾಗಿದೆ ಕೂಡಲೇ ಇದನ್ನ ದುರಸ್ಥಿಪಡಿಸುವ ಮೂಲಕ ಶಿಕ್ಷಕರಿಗೆ ವಾಸಿಸಲು ಅಗತ್ಯ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕಿದೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಶಿಕ್ಷಕರ ವಸತಿ ಗೃಹಗಳು ಶಿಕ್ಷಕರಿಗೆ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳತ್ತಾರಾ ಕಾದು ನೋಡಬೇಕಿದೆ.