ಟ್ಯಾಂಕರ್ ಮತ್ತು ಆಟೋ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಆಟೋದಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಆರು ಜನ ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ಬಳಿ ಗುರುವಾರ ಸಂಜೆ ನಡೆದಿದೆ.
ಮೃತರು ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ನಜ್ಮಿನ್ ಬೇಗಂ (28), ಬೀಬಿ ಫಾತಿಮಾ(12), ಅಬೂಬಕ್ಕರ್ (4), ಬೀಬಿ ಮರಿಯಮ್ (3 ತಿಂಗಳು), ಮಹ್ಮದ್ ಪಾಷಾ (20) ಹಾಗೂ ಆಟೋ ಚಾಲಕ ಬಾಬಾ (35) ಮೃತರು ಎಂದು ಗುರುತಿಸಲಾಗಿದೆ. ಅದೇ ಕುಟುಂಬದ 10 ವರ್ಷದ ಓರ್ವ ಬಾಲಕ ಮಹ್ಮದ್ ಹುಸೇನ್ ಗಾಯಗೊಂಡಿದ್ದಾನೆ.
ಆಧಾರ ತಿದ್ದುಪಡಿಗಾಗಿ ಚಿತ್ತಾಪುರಕ್ಕೆ ತೆರಳಿ ವಾಡಿ ಪಟ್ಟಣದಿಂದ ನಾಲವಾರ ಗ್ರಾಮಕ್ಕೆ ವಾಪಸ್ ತೆರಳುತ್ತಿದ್ದ ವೇಳೆ ಆಟೋಗೆ ಬೂದಿ ತುಂಬಿದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಹೆದ್ದಾರಿ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಮೃತದೇಹಗಳನ್ನು ವಾಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ವಾಡಿ ಪೊಲೀಸ್ ಠಾಣೆ ಪಿಎಸ್ಐ ತಿರುಮಲೇಶ್ ಕುಂಬಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.