ಯಡ್ರಾಮಿ ತಾಲೂಕಿನ ಕಾಚಾಪೂರ ಗ್ರಾಮದ ವಿವಿಧ ಗಲ್ಲಿಗಳಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವಂತೆ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಒತ್ತಾಯ
ಈ ಕುರಿತು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಎಎಸ್‌ಎಸ್‌ಕೆ ಯುವ ಘಟಕ ಅಧ್ಯಕ್ಷ ಎನ್ ಕೆ ಅರ್ಜುನ ಮಾತನಾಡಿ, “ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಬಹಿರಂಗವಾಗಿಯೇ ನಡೆಯುತ್ತಿದ್ದು, ಇದರಿಂದ ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ” ಎಂದು ಆರೋಪಿಸಿದೆ.
“ಅಕ್ರಮ ಮದ್ಯ ಸೇವನೆಯಿಂದ ಕೌಟುಂಬಿಕ ಕಲಹ, ಸಾರ್ವಜನಿಕ ಶಾಂತಿಗೆ ಧಕ್ಕೆ ಸೇರಿದಂತೆ ಹಲವು ಸಾಮಾಜಿಕ ಸಮಸ್ಯೆಗಳು ಉಂಟಾಗುತ್ತಿವೆ. ಈ ಕುರಿತು ಗ್ರಾಮಸ್ಥರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಹಾಗೂ ಮನವಿ ಸಲ್ಲಿಸಿದ್ದರೂ, ಇದುವರೆಗೆ ಶಾಶ್ವತ ಪರಿಹಾರ ದೊರೆತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಮದ್ಯ ಮಾರಾಟದ ಕುರಿತು ಸಮಗ್ರ ತನಿಖೆ ನಡೆಸಬೇಕು. ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕಾನೂನುಬದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮದಲ್ಲಿ ಇಂತಹ ಚಟುವಟಿಕೆಗಳು ಮರುಕಳಿಸದಂತೆ ನಿರಂತರ ನಿಗಾ ವಹಿಸಬೇಕು” ಎಂದು ಆಗ್ರಹಿಸಿದೆ.
“ಈ ಹಿಂದೆ ಸಲ್ಲಿಸಿರುವ ದೂರುಗಳ ಕುರಿತು ಕೈಗೊಂಡ ಕ್ರಮಗಳ ವಿವರವನ್ನು ಪರಿಶೀಲಿಸಿ, ಕರ್ತವ್ಯಲೋಪ ಅಥವಾ ನಿರ್ಲಕ್ಷ್ಯ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಎಸ್‌ಐಆರ್ ಪ್ರಕ್ರಿಯೆ ದೋಷಪೂರಿತ ಹಾಗೂ ಅವೈಜ್ಞಾನಿಕವಾಗಿದೆ : ನೂರ್ ಶ್ರೀಧರ್
“ಒಂದು ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಸಂಬಂಧಪಟ್ಟ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ” ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇವಾ ಸಮಿತಿಯ ಪದಾಧಿಕಾರಿಗಳು, ಮುಖಂಡರು, ಮಹಿಳೆಯರು ಸೇರಿದಂತೆ ಇನ್ನಿತರರು ಇದ್ದರು.





