ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ದೋಷಪೂರಿತ ಹಾಗೂ ಅವೈಜ್ಞಾನಿಕವಾಗಿದೆ. ಇದನ್ನು ನಾವು ಒಪ್ಪುವುದಿಲ್ಲ ಎಂದು ಎದ್ದೇಳು ಕರ್ನಾಟಕ ರಾಜ್ಯ ಸಂಚಾಲಕ ಸಮಿತಿ ಸದಸ್ಯ ನೂರ್ ಶ್ರೀಧರ್ ಹೇಳಿದರು.
ಎಸ್‌ಐಆರ್ ಹಿನ್ನೋಟ ಮತ್ತು ಮುನ್ನೋಟ ಕುರಿತು ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ವಿವಿಧ ಸಂಘಟನೆಗಳ ಮುಖಂಡರ ಸಮಾಲೋಚನಾ ಸಭೆ ಸೋಮವಾರ ನಗರದ ಹಿದಾಯತ್ ಸೆಂಟರ್‌ನಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಅವರು, “ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಮೂಲಕ ಮುಂದಿನ ಚುನಾವಣೆಯಲ್ಲಿ ಜನರನ್ನು ಮತದಾನದ ಹಕ್ಕಿನಿಂದ ವಂಚಿಸುವ ಹುನ್ನಾರ ನಡೆಯುತ್ತಿದೆ” ಎಂದು ಆರೋಪಿಸಿದರು.
“ಎಸ್‌ಐಆರ್ ಜಾರಿಗೆ ಮುನ್ನ ಚುನಾವಣಾ ಆಯೋಗವು ಜನರಲ್ಲಿ ಸಮರ್ಪಕ ಜಾಗೃತಿ ಮೂಡಿಸುವಲ್ಲಿ ವಿಫಲವಾಗಿದೆ. ಅರ್ಜಿ ಭರ್ತಿ ಮಾಡುವುದು, ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಸೇರಿದಂತೆ ಪ್ರಕ್ರಿಯೆಯ ಕುರಿತು ಜನರಿಗೆ ಸೂಕ್ತ ಮಾಹಿತಿ ನೀಡಿಲ್ಲ. ಬಿಎಲ್‌ಒ ಹಾಗೂ ಬಿಎಲ್‌ಎಗಳು ಕೂಡ ಮತದಾರರಿಗೆ ಅಗತ್ಯ ಸಹಕಾರ ನೀಡಿಲ್ಲ” ಎಂದು ದೂರಿದರು.
“ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿರುವ ಕುರಿತು ಕನಿಷ್ಠ 200 ಬೂತ್‌ಗಳಿಂದ ನೈಜ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸಿ, ಸಂಬಂಧಪಟ್ಟವರಿಗೆ ಸಹಕಾರ ನೀಡಲು ನಿರ್ಧರಿಸಲಾಗಿದೆ. ಎಸ್‌ಐಆರ್ ವಿರುದ್ಧ ಪ್ರತಿರೋಧ ಮುಂದುವರಿಸುತ್ತಲೇ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುವುದು” ಎಂದರು.
“ಡಿಲಿಮಿಟೇಷನ್ ಮೂಲಕ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಿ ರಾಜಕೀಯ ಲಾಭ ಪಡೆಯುವ ಹುನ್ನಾರವೂ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಎಸ್‌ಐಆರ್ ಪ್ರಕ್ರಿಯೆಯನ್ನು ಒಪ್ಪಿಕೊಳ್ಳುವುದಿಲ್ಲ” ಎಂದು ಎಚ್ಚರಿಸಿದರು.
ಇದೇ ವೇಳೆ ಮಾತನಾಡಿದ ಎದ್ದೇಳು ಕರ್ನಾಟಕ ರಾಜ್ಯ ಸಂಚಾಲಕ ಸಮಿತಿ ಸದಸ್ಯ ಯೂಸುಫ್ ಖನ್ನಿ, “ಎಸ್‌ಐಆರ್ ಅನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಚುನಾವಣಾ ಆಯೋಗವನ್ನು ಬಿಜೆಪಿ ತನ್ನ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ” ಎಂದು ದೂರಿದರು.
“ಕರ್ನಾಟಕದಲ್ಲಿ ಸುಮಾರು 1.10 ಕೋಟಿ ಮತದಾರರ ಹೆಸರುಗಳು ಅಳಿಸುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದ ಅವರು, 2024ರಲ್ಲಿ ರಾಜ್ಯದಲ್ಲಿ ಸುಮಾರು 5.38 ಕೋಟಿ ಮತದಾರರಿದ್ದರು. ಒಂದು ವರ್ಷದಲ್ಲಿ 16 ಲಕ್ಷ ಮತದಾರರು ಹೆಚ್ಚಾಗಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ. ಆದರೆ ಮತದಾರರ ಸಂಖ್ಯೆಗೆ ಸಂಬಂಧಿಸಿದ ಕೆಲವು ಅಂಕಿ-ಅಂಶಗಳ ಬಗ್ಗೆ ಅನುಮಾನಗಳಿದ್ದು, ಈ ಕುರಿತು ಸ್ಪಷ್ಟತೆ ಅಗತ್ಯವಿದೆ” ಎಂದರು.
ಇದನ್ನು ಓದಿದ್ದೀರಾ? ಯಾದಗಿರಿ | ವಿದ್ಯುತ್ ಕಂಬಕ್ಕೆ ಟಾಟಾ ಎಸಿ ಡಿಕ್ಕಿ: ಮೂವರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವು!
“ಎಸ್‌ಐಆರ್ ವಿರೋಧಿ ಒಕ್ಕೂಟದಿಂದ ಆಗಸ್ಟ್ 29ರಂದು ಕಲಬುರಗಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 1ರಂದು ಬೆಂಗಳೂರು ಚಲೋ ಹಾಗೂ ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಮತದಾನದ ಹಕ್ಕು ರಕ್ಷಣೆಗಾಗಿ ಹೋರಾಟ ನಡೆಸಲು ಯೋಜಿಸಲಾಗಿದೆ” ಎಂದು ಮುಖಂಡರು ತಿಳಿಸಿದರು.
ಸಭೆಯಲ್ಲಿ ಎದ್ದೇಳು ಕರ್ನಾಟಕ ವಲಯ ಸಂಚಾಲಕ ಲಕ್ಷ್ಮಣ ಮಂಡಲಗೇರಾ, ಜಿಲ್ಲಾ ಸಂಚಾಲಕ ರಾಜೇಂದ್ರ ರಾಜವಾಳ, ದಸಂಸ ಹಿರಿಯ ಹೋರಾಟಗಾರ ಡಾ.ಡಿ ಜಿ ಸಾಗರ, ದಸಂಸ ಮುಖಂಡ ಮರಿಯಪ್ಪ ಹಳ್ಳಿ, ಶಂಕರ್, ಭೀಮಶಾ ವಾಲಿ, ಮುಬ್ಬಿನ್ ಅಹಮ್ಮದ್, ಅಬ್ದುಲ್ ಖಾದರ್, ಅಜುಮ್ ಮಾಳಗೆ, ವಿಜಯಲಕ್ಷ್ಮಿ ದೊಡ್ಡಮನಿ, ರೇಷ್ಮಾ ನಂದೂರ್, ಇಬ್ರಾಹಿಂ ಯಾಳವಾರ್, ದಸಂಸ ಮುಖಂಡ ಮರೆಪ್ಪ ಚಟ್ಟೇಕರ್, ಭೀಮರಾಯ, ಮಹಮ್ಮದ್ ಸಲೀಂ, ಓಪ್ರಕಾಶ್ ರೋಟ್ಟೆ, ಬಾಬು ಪಾಟೀಲ್, ಮಹಾಂತೇಶ ಕೌವಲಗಿ, ಸಿದ್ರಾಮ್ ನಾಡಗೇರಿ, ವೈಭವ ಬಬಲಾದ, ಶಿವಶಂಕರ್ ಸೇರಿದಂತೆ ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.





