ಮೈಕ್ರೊ ಫೈನಾನ್ಸ್ ಕಂಪನಿಯ ಸಿಬ್ಬಂದಿಯ ಕಿರುಕುಳ ಮುಂದುವರೆದಿದ್ದು, ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಯಾತನೂರ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮೈಕ್ರೊ ಫೈನಾನ್ಸ್ ಕಿರುಕುಳದಿಂದ ನೊಂದು ನಿದ್ರೆ ಮಾತ್ರೆ ಸೇವಿಸಿ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ನಾಗೇಶ ರಾಮಣ್ಣ ರೂಗಿ (50) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎನ್ನಲಾಗಿದೆ. ನಾಗೇಶ ಅವರು ಕಲಬುರಗಿ ನಗರದ ಹಿಂದೂಜಾ ಹಣಕಾಸು ಸಂಸ್ಥೆಯಲ್ಲಿ ಒಟ್ಟು ₹5 ಲಕ್ಷ ಸಾಲ ಪಡೆದುಕೊಂಡಿದ್ದರು. ಅದರಲ್ಲಿ ₹3.5 ಲಕ್ಷ ಮರುಪಾವತಿಸಿದರು. ಉಳಿದ ₹1.5 ಲಕ್ಷ ಸಾಲದ ಹಣ ಕಟ್ಟುವಂತೆ ಹಿಂದೂಜಾ ಹಣಕಾಸು ಸಂಸ್ಥೆಯ ಸಿಬ್ಬಂದಿ ಯಾತನೂರ ಗ್ರಾಮದ ಮನೆಗೆ ಬಂದು ಕಿರುಕುಳ ನೀಡುತ್ತಿದ್ದರುʼ ಎಂದು ಆರೋಪಿಸಲಾಗಿದೆ.
ಸಾಲಗಾರ ನಾಗೇಶ ಅವರ ಮನೆಯ ಗೋಡೆ ಮೇಲೆ ʼಹಿಂದೂಜಾ ಫೈನಾನ್ಸ್‌ಗೆ ಅಡಮಾನ ಮಾಡಲಾಗಿದೆʼ, ʼಈ ಮನೆ ಮಾರಾಟಕ್ಕೆ ಇದೆʼ ಎಂದು ಫೈನಾನ್ಸ್ ಸಿಬ್ಬಂದಿ ಬರೆದಿದ್ದರು. ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಿದ ಕಾರಣಕ್ಕೆ ಮನೆಯಲ್ಲಿ ನಿದ್ರೆ ಮಾತ್ರೆ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನಾಗೇಶ ಪತ್ನಿ ಸುನಂದಾ ರೂಗಿ ನೆಲೋಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಹಳೆ ವೈಷಮ್ಯ : ಸ್ನೇಹಿತರಿಂದಲೇ ಯುವಕನ ಕೊಲೆ
ʼಫೈನಾನ್ಸ್‌ನ ಅಧಿಕಾರಿ ಹಾಗೂ ಸಿಬ್ಬಂದಿ ಪದೇ ಪದೇ ಮನೆಗೆ ಬಂದು ಸಾಲ ಮರು ಪಾವತಿಸುವಂತೆ ಕಿರುಕುಳ ನೀಡುತ್ತಿದ್ದರು. ಸಾಲ ಮರುಪಾವತಿಸದೇ ಇದ್ದರೆ ಮನೆಗೆ ಕೀಲಿ ಹಾಕುತ್ತೇವೆ ಎಂದು ಮಾನಸಿಕ ಹಿಂಸೆ ಕೊಡುತ್ತಿದ್ದರುʼ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.