ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಇಮಡಾಪುರದಲ್ಲಿ ಮದ್ಯ ಸೇವನೆ ಚಟ ಬಿಡಿಸಲು ನಾಟಿ ವೈದ್ಯ ನೀಡಿದ್ದ ಔಷಧ ಸೇವಿಸಿದ್ದ ಮೂವರು ಬುಧವಾರ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಸೇಡಂ ತಾಲೂಕಿನ ಬುರಗಪಲ್ಲಿ ಗ್ರಾಮದ ಲಕ್ಷ್ಮಿ ನರಸಿಂಹಲು ಬಟಗೇರಾ (55), ಮದಕಲ್ ಗ್ರಾಮದ ನಾಗೇಶ (32) ಹಾಗೂ ಶಹಾಬಾದ್ ಬಳಿಯ ಡಕ್ಕಾ ತಾಂಡಾ ಗಣೇಶ ರಾಠೋಡ್ (30) ಮೃತರು ಎಂದು ತಿಳಿದು ಬಂದಿದ್ದು, ಲಕ್ಷ್ಮಿ ಅವರ ಮಗ ಲಿಂಗಪ್ಪ ಅವರ ಸ್ಥಿತಿ ಗಂಭೀರವಾಗಿದ್ದು, ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಇಮಡಾಪುರ ಗ್ರಾಮದಲ್ಲಿ ಫಕೀರಪ್ಪ ಅಲಿಯಾಸ್ ಸಾಯಪ್ಪ ಅವರು ಕುಡಿತದ ಚಟ ಬಿಡಿಸಲು ಔಷಧ ನೀಡುತ್ತಿದ್ದರು. ನಾಲ್ವರು ಔಷಧ ಪಡೆದಿದ್ದರು ಎನ್ನಲಾಗಿದೆ. ಪ್ರಾಥಮಿಕ ಮಾಹಿತಿಯಂತೆ ಮದ್ಯ ಸೇವನೆ ವ್ಯಸನದಿಂದ ಹೊರಬರಲು ಕೆಲವರು ನಾಟಿ ಔಷಧ ಪಡೆದಿದ್ದರು. ಭಾನುವಾರ ಔಷಧ ಪಡೆದಿದ್ದ ಜನರು ಮತ್ತೆ ಬುಧವಾರವೂ ಬಂದು ಔಷಧ ಪಡೆದಿದ್ದರು.
ಇದನ್ನೂ ಓದಿ : ಬೀದರ್ | ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಅಪಾಯಕಾರಿ : ಸಚಿವ ಈಶ್ವರ ಖಂಡ್ರೆ
ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಔಷಧ ನೀಡಿದ ಫಕೀರಪ್ಪ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.