ಸೇಡಂ ತಾಲ್ಲೂಕಿನ ಮಲ್ಕಾಪಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಕುಸಿದು ಬಿದ್ದು ಮೂವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಡೆದಿದೆ.
ಮಲ್ಕಾಪಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನ ಊಟದ ವೇಳೆ ಕೊಠಡಿಯ ಮೇಲ್ಬಾವಣಿಯ ಪದರು ಉದುರಿ ವಿದ್ಯಾರ್ಥಿಗಳ ಮೇಲೆ ಬಿದ್ದಿರುವ ಬೆನ್ನೆಲೆ ಹತ್ತಿರದ ಕೊಲಕುಂದ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಾಯಗೊಂಡ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗಿದೆ.
ಈ ಶಾಲೆಯಲ್ಲಿ ಒಟ್ಟು 300 ವಿದ್ಯಾರ್ಥಿಗಳಿದ್ದು, 1 ರಿಂದ 8ನೇ ತರಗತಿವರೆಗೆ ಇದೆ. ನಾಲ್ಕು ಕೊಠಡಿಗಳಿದ್ದು, ಶಿಥಿಲಾವಸ್ತೆಗೆ ತಲುಪಿದ ಹಿನ್ನೆಲೆ ಚಾವಣಿ ಕುಸಿದು ಬಿದ್ದಿದೆ ಎಂದು ತಿಳಿದು ಬಂದಿದೆ.

ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಹಾಗೂ ಆ ಶಾಲಾ ಕಟ್ಟಡಕ್ಕೆ ಹೋಗಲು ಹೊಸ ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶಾಲಾ ಆವರಣದಲ್ಲಿ ಧರಣಿ ನಡೆಸಿದರು.

ವಿಷಯ ತಿಳಿದು ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ ಅವರು ಶಾಲೆಗೆ ಭೇಟಿ ನೀಡಿ ಶಿಥಿಲಗೊಂಡ ಕೊಠಡಿಗಳನ್ನು ಪರಿಶೀಲಿಸಿದರು. ಬಳಿಕ ಮೇಲ್ಪಾವಣಿ ಕುಸಿದ ಕೋಣೆಯಲ್ಲಿ ಮಕ್ಕಳನ್ನು ಕೂರಿಸಿ ತರಗತಿ ನಡೆಸಬೇಡಿ. ಬೇರೆ ಕೋಣೆಯಲ್ಲಿ ತರಗತಿ ನಡೆಸಬೇಕೆಂದು ಶಿಕ್ಷಕರಿಗೆ ಸೂಚಿಸಿದರು.