ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ಮಂಗಳವಾರ ಕರೆ ನೀಡಿದ್ದ ಹಿನ್ನೆಲೆ ಇಂದು ಕಲಬುರಗಿ ಸಾರಿಗೆ ವ್ಯವಸ್ಥೆ ಬಸ್‌ಗಳ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.
ಕಲಬುರಗಿ ನಗರದಿಂದ ವಿವಿಧ ತಾಲೂಕುಗಳಿಗೆ ತೆರಳಲು ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಕೇಂದ್ರ ಬಸ್ ನಿಲ್ದಾಣ, ಶಹಾ ಬಝಾರ್ ನಾಕಾ, ಸೂಪರ್ ಮಾರ್ಕೆಟ್, ಗಂಜ್ ಪ್ರದೇಶ ಸೇರಿದಂತೆ ಇತರ ಕಡೆಗಳಲ್ಲಿ ಬಸ್‌ಗಳು ರಸ್ತೆಗೆ ಇಳಿಯದೇ ಇರುವುದರಿಂದ ಪ್ರಯಾಣಿಕರು ಖಾಸಗಿ ಬಸ್, ಕ್ರೋಜರ್ ಹಾಗೂ ಆಟೋ ರಿಕ್ಷಾಗಳ ಮೇಲೆ ಅವಲಂಬಿಸಿದ್ದು, ಖಾಸಗಿ ವಾಹನಗಳ ಟಿಕೆಟ್ ದರಕಿಂತ ಎರಡುಪಟ್ಟು ದುಪ್ಪಟ್ಟಾಗಿ ಹಣವನ್ನು ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ.

ಆಳಂದ ತಾಲೂಕಿಗೆ ಒಬ್ಬರಿಗೆ ಟಿಕೆಟ್ ದರ ಐವತ್ತು ರೂಪಾಯಿ ಇದ್ದರೆ ಇಂದು ನೂರು (100) ರೂಪಾಯಿ ತೆಗೆದುಕೊಳ್ಳುತ್ತಿರುವುದು ಕಂಡುಬಂತು. ಬಸ್ ಸಂಚಾರವಿಲ್ಲದಿರುವುದರಿಂದ ಅನಿವಾರ್ಯತೆಯಿಂದ ಸಾರ್ವಜನಿಕರು ಅವರು ಕೇಳಿದಷ್ಟು ಹಣ ಕೊಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಲಬುರಗಿಯ ಕೇಂದ್ರ ಬಸ್ ನಿಲ್ದಾಣಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್ ಡಿ ಭೇಟಿ ನೀಡಿ ಮುಷ್ಕರ ಹಾಗೂ ಪ್ರಯಾಣಿಕರ ಸಂಚಾರದ ಕುರಿತು ಮಾಹಿತಿ ಪಡೆದುಕೊಂಡರು. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಕಮಿಷನರ್ ಸೂಚನೆ ನೀಡಿದರು.
