ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಘಟನೆ ಸಂಬಂಧ ನಾಲ್ವರರು ಯುವಕರು ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನಗರದ ಮಹಾತ್ಮಾಗಾಂಧಿ ಕಾಲೋನಿಯ ಕಿರಣ, ತಾಜ ಸುಲ್ತಾನಪೂರದ ಕಿರಣ ಠಾಕೂರ್, ನರಸಿಂಗ್ ಠಾಕೂರ್, ದೇವಿ ನಗರದ ನಿವಾಸಿ ಶರಣು ಬಿರಾದಾರ ಹಾಗೂ ಮತ್ತೊರ್ವನ ವಿರುದ್ಧ ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಆಗಸ್ಟ್ 19ರ ಬೆಳಗ್ಗೆ 11 ಗಂಟೆಗೆ ಇನ್ಸ್ ಟಾಗ್ರಾಂನಲ್ಲಿ ನಾಲ್ಕು ಜನ ಯುವಕರು ತಮ್ಮ ಕೈಯಲ್ಲಿ ಮಚ್ಚುಗಳನ್ನು ಹಿಡಿದುಕೊಂಡು ವಿಡಿಯೋ ಮಾಡಿದ್ದಲ್ಲದೆ ಸಾರ್ವಜನಿಕರಿಗೆ ಹೆದರಿಸಿ ಭಯದ ವಾತಾವರಣ ನಿರ್ಮಾಣ ಮಾಡಿದ ವಿಡಿಯೋ ವೈರಲ್ ಆಗಿದ್ದು, ಇದನ್ನು ಗಮನಿಸಿದ ಪೊಲೀಸರು, ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಹೆದರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಕುರಿತು ರಾಘವೇಂದ್ರ ನಗರ (ಆರ್.ಜಿ.ನಗರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.