ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಆಕೆಯ ಆತ್ಮಹತ್ಯೆಗೆ ಕಾರಣರಾದ ಗಂಡ ಮತ್ತುಆತನ ತಾಯಿಗೆ ಕಲಬುರಗಿಯ 5ನೇ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ ದಂಡ ವಿಧಿಸಿದೆ.
ಮೃತಳ ಪತಿ ಕಲಬುರಗಿ ನಿವಾಸಿ ವಿನಯ ವಿಜಯಕುಮಾರ ಕಮಲಾಪುರ ಮತ್ತು ಆತನ ತಾಯಿ ಶಶಿಕಲಾ ವಿಜಯಕುಮಾರ ಕಮಲಾಪುರ ಶಿಕ್ಷೆಗೊಳಗಾದವರು.
ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಡೊಣಗಾಪುರ ಗ್ರಾಮದ ಧನರಾಜ ನಾಗಶೆಟ್ಟಿ ಮೆಂಗಾ ಎಂಬುವರ ಮಗಳು ಸಂಧ್ಯಾರಾಣಿಯನ್ನು ವಿನಯ ಅವರೊಂದಿಗೆ 2017ರ ಜೂನ್ 19 ರಂದು ವರದಕ್ಷಿಣೆ ರೂಪದಲ್ಲಿ 11 ಲಕ್ಷ ಮತ್ತು 21 ತೊಲೆ ಬಂಗಾರ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಆದರೆ ಮದುವೆಯಾದ 5 ತಿಂಗಳ ನಂತರ ಸಂಧ್ಯಾರಾಣಿಯ ಗಂಡ ಮತ್ತು ಅತ್ತೆ ಶಶಿಕಲಾ ಇಬ್ಬರೂ ಸೇರಿ ಮದುವೆ ಸಂದರ್ಭದಲ್ಲಿ ಕಡಿಮೆ ವರದಕ್ಷಿಣೆ ತಂದಿದ್ದು, ಇನ್ನೂ ಹೆಚ್ಚಿನ ಹಣ, ಬಂಗಾರ ಮತ್ತು ಕಾರು ತೆಗೆದುಕೊಂಡು ಬರುವಂತೆ ಕಿರುಕುಳ ನೀಡುತ್ತಿದ್ದರು.
ಗಂಡ ಮತ್ತು ಅತ್ತೆಯ ಕಿರುಕುಳ ತಾಳಲಾರದೆ ಸಂಧ್ಯಾರಾಣಿ 2018ರ ಸಪ್ಟೆಂಬರ್ 29 ಮತ್ತು 30 ನಡುವಿನ ಅವಧಿಯಲ್ಲಿ ಗಂಡನ ಮನೆಯ ಬೆಡ್ ರೂಮಿನಲ್ಲಿ ಫ್ಯಾನ್ಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಪತ್ರಕರ್ತನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಹಲ್ಲೆ; ಖಂಡನೀಯ
ವಾದ ಪ್ರತಿವಾದ ಆಲಿಸಿದ 5ನೇ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರಶೇಖರ ಕರೋಶಿ ಅವರು ಶಿಕ್ಷೆಯನ್ನು ವಿಧಿಸಿದ್ದಾರೆ. ಸರ್ಕಾರದ ಪರವಾಗಿ, ಸರ್ಕಾರಿ ಅಭಿಯೋಜಕ ಹಯ್ಯಾಳಪ್ಪ, ಎನ್.ಬಳಬಟ್ಟಿ ಅವರು ವಾದ ಮಂಡಿಸಿದ್ದರು