ವಿವಾಹೇತರ ಸಂಬಂಧ ಶಂಕೆ ಹಿನ್ನೆಲೆ ಚಾಕುವಿನಿಂದ ಇರಿದು ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ಶಹಾಬಜಾರ್ ಪ್ರದೇಶದ ಲಂಗೋಟಿ ಪೀರ್ ದರ್ಗಾದ ಸಮೀಪ ನಡೆದಿದೆ.
ಮಂಗಳವಾರ ಬೆಳಿಗ್ಗೆ ಘಟನೆ ಜರುಗಿದ್ದು ರೂಪಾ ವೆಂಕಟೇಶ್ ಬಿರಾದಾರ(35) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ.
ಮೃತರು ಮೂಲತಃ ಕಲ್ಲಹಂಗರಗಾ ಗ್ರಾಮದವರಾಗಿದ್ದು, 10 ವರ್ಷದ ಹಿಂದೆ ವೆಂಕಟೇಶ್ ಎಂಬುವವರ ಜೊತೆ ಮದುವೆಯಾಗಿದ್ದರು. ವಿವಾಹೇತರ ಸಂಬಂಧ ಹಿನ್ನೆಲೆ ಕೆಲ ವರ್ಷಗಳಿಂದ ನಗರದ ಶಹಾಬಜಾರ್ ಬಡಾವಣೆಯಲ್ಲಿ ವಾಸವಿದ್ದರು. ಹೋಟೆಲ್‌ನಲ್ಲಿ ಸಮೋಸಾ ಕೆಲಸ ಮಾಡಿ ಉಪಜೀವನ ನಡೆಸುತ್ತಿದ್ದರು.
ಇಂದು ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಿ, ಕೆಲಸಕ್ಕೆ ಹೋಗುವಾಗ, ಆಕೆಯ ಪತಿ ವೆಂಕಟೇಶ್ ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತನಿಖೆಯಿಂದ ಮತ್ತಷ್ಟು ಸತ್ಯ ಹೊರಬೀಳಲಿದೆ.
ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ