ಭೀಮಾ ತೀರದ ದೇವಲ್ ಗಾಣಗಾಪುರದಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವಕ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ಗಾಯಗೊಂಡ ಯುವಕನನ್ನು ದತ್ತು (19) ಟಂ-ಟಂ ಚಾಲಕನೆಂದು ಗುರುತಿಸಲಾಗಿದೆ. ಶುಕ್ರವಾರ ನಸುಕಿನ ಜಾವ 2.17ರ ಸುಮಾರಿಗೆ ಸಂಗಮ ರಸ್ತೆಯಲ್ಲಿರುವ ಅವಧೂತ ಆಶ್ರಮದ ಸಮೀಪ ಈ ಘಟನೆ ನಡೆದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳಿಗೆ ಹುಡುಕಾಡಿದಾಗ ಅದೇ ಗ್ರಾಮದ ಪ್ರಜ್ವಲ್, ಹಾಗೂ ಪ್ರೀತಮ್ ಎಂಬುವರ ಹೆಸರು ಕೇಳಿಬಂದಿದೆ. ಇವರು ದ್ವಿಚಕ್ರ ವಾಹನದಲ್ಲಿ ಬಂದು ದತ್ತು ಸೊನ್ನ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ದತ್ತು ಸೊನ್ನ ಅವರನ್ನು ಕೂಡಲೇ ಚಿಕಿತ್ಸೆಗಾಗಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಪ್ರಾಥಮಿಕ ಮಾಹಿತಿಯಂತೆ, ʼದಿಟ್ಟಿಸಿ ನೋಡಿದ ವಿಚಾರʼವನ್ನು ನೆಪವನ್ನಾಗಿ ಮಾಡಿಕೊಂಡು ಹಲ್ಲೆ ನಡೆಸಲಾಗಿದೆ ಎಂದು ಗಾಯಾಳು ಯುವಕ ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ. ಆದರೆ, ಘಟನೆಯ ನಿಖರ ಕಾರಣ ಪೊಲೀಸ್ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.
ಈ ಘಟನೆ ದೇವಲ್ ಗಾಣಗಾಪುರ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆ ಹಾಗೂ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿರ್ವ: ಅಪಾಯಕಾರಿ ರಸ್ತೆ ಗುಂಡಿ ಮುಚ್ಚಿದ ಯುವಕರು – ಸಮಾಜಸೇವೆಗೆ ಮೆಚ್ಚುಗೆ
ಸಮಾಜದ ಭವಿಷ್ಯವೆಂದು ಪರಿಗಣಿಸಲ್ಪಡುವ ಯುವಜನರು ಕ್ಷುಲ್ಲಕ ಕಾರಣಗಳಿಗೆ ಹಿಂಸೆಯ ಮಾರ್ಗ ಹಿಡಿಯುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ವಿದ್ಯಾಭ್ಯಾಸ, ಉದ್ಯೋಗ ಮತ್ತು ಉತ್ತಮ ಜೀವನದತ್ತ ಸಾಗಬೇಕಾದ ವಯಸ್ಸಿನಲ್ಲಿ ದ್ವೇಷ, ಆಕ್ರೋಶ ಮತ್ತು ಹಿಂಸಾಚಾರಕ್ಕೆ ಬಲಿಯಾಗುತ್ತಿರುವ ಘಟನೆಗಳು ಹೆಚ್ಚುತ್ತಿರುವುದು ಸಮಾಜಕ್ಕೆ ಎಚ್ಚರಿಕೆಯ ಸಂದೇಶವಾಗಿದೆ.
ಯುವಕರು ಕ್ಷಣಿಕ ಕೋಪಕ್ಕೆ ಒಳಗಾಗದೆ, ಕಾನೂನು ಮತ್ತು ಮಾನವೀಯ ಮೌಲ್ಯಗಳನ್ನು ಗೌರವಿಸಿ ಶಿಕ್ಷಣ, ಕೌಶಲ್ಯ ಹಾಗೂ ಉತ್ತಮ ನಾಗರಿಕತೆಯತ್ತ ಗಮನ ಹರಿಸಿದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ.





