ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆಗೆ ಗೊಣ್ಣೆಹುಳುವಿನ ಬಾಧೆ ಕಂಡು ಬಂದಿದ್ದು, ರೈತರು ಆತಂಕಗೊಂಡಿದ್ದಾರೆ. ಮಳೆ ವಿಳಂಬದಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ಇದೀಗ ತೊಗರಿ ಬೆಳೆಗೆ ರೋಗ ಬಡಿದಿರುವುದರಿಂದ ತೊಗರಿ ಬೆಳೆಗಾರರು ಇನ್ನಷ್ಟು ಆತಂಕಕ್ಕೀಡಾಗಿದ್ದಾರೆ.
ಅಲ್ಪಸ್ವಲ್ಪ ಬಂದ ಮಳೆಗೆ ತೊಗರಿ ಬಿತ್ತನೆ ಮಾಡಿ ಉತ್ತಮ ಬೆಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಇದೀಗ ಗೊಣ್ಣೆ ಹುಳಿವಿನ ಬಾಧೆ ಉಂಟಾಗಿದೆ. ಕಳೆದ ವರ್ಷ ಬೆಳೆದ ಬೆಳೆ ನೆಟೆ ರೋಗದಿಂದ ಹಾಳಾಗಿತ್ತು. ಈ ಬಾರಿ ಗೊಣ್ಣೆ ಹುಳುವಿನ ರೋಗ ಬಂದಿರುವುದು ರೈತರಿಗೆ ದಿಕ್ಕು ತೋರದಂತಾಗಿದೆ.
ಕಲಬುರಗಿ ತಾಲೂಕಿನ ಫರಹತಾಬಾದ ಹೋಬಳಿಯ ಫೀರೊಜಾಬಾದ್ ನಡುವಿನಹಳ್ಳಿ ಮತ್ತು ಸೋಮನಾಥಹಳ್ಳಿಗೆ ಕಲಬುರಗಿ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ಕೃಷಿ ಅಧಿಕಾರಿ ಶೃತಿ ಹಾಗೂ ಶಿವರಾಯ ಬಿಟಿಎಂ ಅವರು ಕ್ಷೇತ್ರಕ್ಕೆ ಭೇಟಿ ನೀಡಿದಾಗ ಮಣ್ಣಿನಲ್ಲಿ ತೇವಾಂಶ ಕೊರತೆಯಿಂದ ತೊಗರಿ ಬೆಳೆಯಲ್ಲಿ ಗೊಣ್ಣೆ ಹುಳುವಿನ ಬಾಧೆ ಉಂಟಾಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅದರ ಹತೋಟಿಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೃಷಿ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.
ಗೊಣ್ಣೆ ಹುಳು ಬಾಧೆ ಲಕ್ಷಣಗಳು
“ಬೇರು ಮತ್ತು ಕಾಂಡ ಕೊರೆದು ಗಿಡಗಳು ಬಾಡುವುದು ಈ ಬಾಧೆಯ ಲಕ್ಷಣಗಳಾಗಿದ್ದು, ರೈತರು ಕೆಲವು ಹತೋಟಿ ಕ್ರಮಗಳನ್ನು ಅನುಸರಿಸಬೇಕು” ಎಂದು ಕಲಬುರಗಿ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ತಿಳಿಸಿದ್ದಾರೆ.
ಹತೋಟಿ ಕ್ರಮಗಳು
- ನೀರು ಲಭ್ಯವಿದ್ದಲ್ಲಿ ಜಮೀನಿಗೆ ನೀರು ಹಾಯಿಸುವುದು.
- ಅಂತರ ಬೇಸಾಯ
- ಕೈಯಿಂದ ಮಣ್ಣಿನಲ್ಲಿ ಇರುವ ಹುಳುವನ್ನು ಆರಿಸಿ ತೆಗೆಯುವುದು.
- ಬೇವಿನ ಹಿಂಡಿ 50 ಕೆಜಿ + ಮೆಟಾರಿಜಿಯಂ ಪುಡಿ 2 ಕೆಜಿ ಪ್ರತಿ ಎಕರೆಗೆ ಮಣ್ಣಿಗೆ ಹಾಕಬೇಕು.
- ಕ್ಲೋರೋಪೈರಿಫಾಸ್ 3 ಮಿ ಲೀ ಪ್ರತಿ ಒಂದು ಲೀಟರ್ ನೀರಿಗೆ ಬೇರಿಸಿ ಬೆಳೆಯ ಬೇರಿಗೆ ಸಿಂಪರಣೆ ಮಾಡಬೇಕು.
- ಪ್ರತಿ ಎಕರೆಗೆ 4 ಕೆಜಿ ಫೋರೇಟ್ ಅಥವಾ ಕಾರ್ಬೋಪ್ಯೊರಾನ್-3ಜಿಯನ್ನು ಬೆಳೆಯ ಸಾಲಿಗೆ ಸುರಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ತಿಳಿಸಿದ್ದಾರೆ.
Help full