ಬೇಸಿಗೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ದಾಹ ನೀಗಿಸಲು ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಸಮಾಜಸೇವಕ ಡಾ. ಫಾರೂಕ್ ಮಣ್ಣೂರ ಅವರು ಶಹಾಬಾದ್ ಪಟ್ಟಣದ ನಾಲ್ಕು ಪ್ರಮುಖ ಪ್ರದೇಶಗಳಲ್ಲಿ ಉಚಿತ ಶುದ್ಧ ತಂಪು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ.
ಪಟ್ಟಣದ ಬಸ್ ನಿಲ್ದಾಣ, ಹಳೆ ಶಹಾಬಾದ್, ರಾಮ್ ಸರ್ಕಲ್ ಹಾಗೂ ಬೆಂಡಿ ಬಜಾರ್ ಪ್ರದೇಶಗಳಲ್ಲಿ ನೀರಿನ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಈ ಕೇಂದ್ರಗಳನ್ನು ಸೋಮವಾರ ಡಾ. ಫಾರುಕ್ ಮಣ್ಣೂರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ‘ಬೇಸಿಗೆಯ ಬಿಸಿಲಿನಿಂದ ಬಳಲುತ್ತಿರುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ದೊರೆಯುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ. ನೀರು ಸರಬರಾಜಿಗಾಗಿ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದ್ದು, ನೀರಿನ ಕ್ಯಾನ್ಗಳ ನಿರ್ವಹಣೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬೇಸಿಗೆ ಮುಗಿಯುವವರೆಗೆ ಈ ಸೇವೆಯನ್ನು ಮುಂದುವರಿಸಲಾಗುವುದು’ ಎಂದು ತಿಳಿಸಿದರು.

ನ್ಯಾಯವಾದಿ ಶರಣಬಸಪ್ಪ ಖೇಣಿ ಮಾತನಾಡಿ, ‘ಡಾ. ಫಾರುಕ್ ಮಣ್ಣೂರ ಅವರು ಜಿಲ್ಲೆಯ 750 ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರ ವಿತರಣೆ, ಕಲಬುರಗಿಯಲ್ಲಿ ಉಚಿತ ನೀರಿನ ಟ್ಯಾಂಕರ್ ಸೇವೆ, ಮಧುಮೇಹ ತಪಾಸಣಾ ಅಭಿಯಾನ, ಹಾಗೂ 360 ಬಡ ಹೆಣ್ಣುಮಕ್ಕಳಿಗೆ ಸುಕನ್ಯ ಸಮೃದ್ಧಿ ಯೋಜನೆಯಡಿ ನೆರವು ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿರುವುದಾಗಿ’ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಡಾ. ಫಾರುಕ್ ಮಣ್ಣೂರ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಇದನ್ನು ಓದಿದ್ದೀರಾ? ಕಲಬುರಗಿ | ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ನಿರ್ಧಾರ ಖಂಡಿಸಿ ಎಐಡಿಎಸ್‌ಒ ಆಕ್ರೋಶ
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಲೋಕಾಯುಕ್ತ ಬಸವರಾಜ ಯಲಿಗಾರ, ವಾಜೀದ್ ಜಮಾದಾರ್, ಮಾಜಿ ಸಿಎಂಸಿ ಅಧ್ಯಕ್ಷ ರಫೀಕ್ ಕಾರೋಬಾರಿ, ಕೌನ್ಸಿಲರ್ ಎಸ್. ಕುಮಾರ್, ಜಹೀರ್ ಅಹ್ಮದ್, ಗಿರೀಶ್, ರಾಜೇಶ್ ಯನಗುಂಟಿಕರ್, ಅಮೀರ್ ನಿಂಬಾಳ್ಕರ್, ಹರೀಶ್ ಕಾರ್ಣಿಕ್, ಹರ್ಷಾ ಮಾಲಕ, ಶೈಲೇಶ್ ಹಾಗೂ ಲಲ್ಲು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





