ಗಡಿಭಾಗದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರು ಮಾಡುತ್ತಿರುವ ಶೈಕ್ಷಣಿಕ ಕಾರ್ಯ ನಿಜಕ್ಕೂ ಅಭಿನಂದನೀಯವಾಗಿದೆ ಎಂದು ರಾಜ್ಯ ಸರಕಾರದ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಿತೇಶಕುಮಾರ ಸಿಂಗ್ ಹೇಳಿದರು.
ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ, ವಚನ ಜಾತ್ರೆ-2026, ಡಾ.ಚನ್ನಬಸವ ಪಟ್ಟದ್ದೇವರ 27ನೆಯ ಸ್ಮರಣೋತ್ಸವ ಮತ್ತು ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ನಿಮಿತ್ತ ಹಿರೇಮಠ ಸಂಸ್ಥಾನ ಮತ್ತು ಅಮೃತ ಮಹೋತ್ಸವ ಅಭಿನಂದನಾ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಸ್ವಚ್ಛತಾ ಕಾರ್ಮಿಕರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ʼಗ್ರಾಮೀಣ ಭಾಗದಲ್ಲಿ ತೆರೆದ ವಿದ್ಯಾಸಂಸ್ಥೆಯಿಂದ ಪ್ರತಿವರ್ಷ ನೂರಾರು ಮಕ್ಕಳು ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಸ್ಪರ್ಧಾಪರೀಕ್ಷೆಯಲ್ಲಿ ಮಾಡುತ್ತಿರುವ ಸಾಧನೆ ಶ್ಲಾಘನೀಯವಾಗಿದೆ. ಪೂಜ್ಯರ ಅಮೃತ ಮಹೋತ್ಸವ ಅವರಿಗಾಗಿ ಅಲ್ಲ, ಅವರ
ಬದುಕಿನ ಮೌಲ್ಯಗಳು ಗೌರವಿಸುವ ಸಮಾರಂಭ ಇದಾಗಿದೆ. ಪೂಜ್ಯರ ಅಮೃತ ಮಹೋತ್ಸವ ನಿಮಿತ್ಯ ಪ್ರತಿದಿನ ಸೈನಿಕರು, ಶಿಕ್ಷಕರು, ಕೃಷಿಕರು ಹಾಗೂ ಇಂದು 75 ಸ್ವಚ್ಛತಾ ಕಾರ್ಮಿಕರಿಗೆ ಸನ್ಮಾನ ಮಾಡುತ್ತಿರುವುದು ನಿಜಕ್ಕೂ ಇದು ಬಸವತತ್ವದ ನಿಜಾಚರಣೆಯೇ ಆಗಿದೆ. ಸಮಾಜವನ್ನು ಗೌರವಿಸುವ ಮೂಲಕ ಪೂಜ್ಯರ ಅಮೃತ ಮಹೋತ್ಸವ ಆಚರಿಸುತ್ತಿರುವುದು ಮಾದರಿಯ ಕಾರ್ಯʼ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಸೆಗುಣಸಿಯ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ʼ12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಇದೇ ನಾಡಿನಲ್ಲಿ ಸಮಾನತೆಯ ಮೌಲ್ಯಗಳು ನೀಡಿದರು. ಕಾಯಕಕ್ಕೆ ಘನತೆ ಗೌರವ ತಂದುಕೊಟ್ಟರು.
ಪೂಜೆಯೇ ಕಾಯಕ ಮಾಡಿಕೊಂಡಿರುವ ಸಮಾಜದಲ್ಲಿ ಬಸವಣ್ಣನವರು ಕಾಯಕವೇ ಪೂಜೆ ಎಂದು ಪರಿವರ್ತನೆಗೆ ತಂದರು. ಡಾ.ಬಸವಲಿಂಗ ಪಟ್ಟದ್ದೇವರು ಗಡಿಭಾಗದಲ್ಲಿ ಮಾಡುತ್ತಿರುವ ಸೇವಾ ಕಾರ್ಯಗಳು ಅಭಿನಂದನೀಯವಾಗಿವೆ. ಅವರು ಮಕ್ಕಳಲ್ಲಿ ಬಸವ ಶಿಶುಗಳು ಕಂಡರು. ಅವರ ಸಾನಿಧ್ಯದಲ್ಲಿ ನಡೆದ ಬಸವಸಂಸ್ಕೃತಿ ಅಭಿಯಾನ ಒಂದು ಆಂದೋಲನದ ರೂಪವಾಗಿ ಮಾರ್ಪಟ್ಟಿತ್ತು. ಬಸವತತ್ವ ಪ್ರಸಾರದ ನೂರಾರು ಕನಸುಗಳು ಹೊತ್ತುಕೊಂಡ ಪೂಜ್ಯರ ಜೀವನ ನಮ್ಮೆಲ್ಲರಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು, ಮಹಾಂತ ಶಿವಯೋಗಿಗಳು, ಜಯಶಾಂತಲಿಂಗ ಮಹಾಸ್ವಾಮಿಗಳು, ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಶಿವಾನಂದ ಮಹಾಸ್ವಾಮಿಗಳು, ಸಿದ್ಧಲಿಂಗ ಮಹಾಸ್ವಾಮಿಗಳು, ಹಾವಗಿಲಿಂಗೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿಕೊಂಡಿದ್ದರು.
ಇದನ್ನೂ ಓದಿ: ಔರಾದ್ ಸೀಮೆಯ ಕನ್ನಡ | ಸುಡು ಬಿಸಲಾಗ ಭಾಳ ಓಡಾಡಬ್ಯಾಡ; ಬೇಮಾರ ಬಿದ್ದೂರ್ ಹೈರಾಣ ಅದಾ!
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರೆ, ಬಸವರಾಜ ಪಾಟೀಲ ಸೇಡಂ, ರೇವಣಸಿದ್ದಪ್ಪ ಜಲಾದೆ, ಗುರುನಾಥ ಕೊಳ್ಳೂರು, ಪ್ರಕಾಶ ಟೊಣ್ಣೆ, ವೈಜಿನಾಥ ಕಾಮಶೆಟ್ಟಿ, ಸಿದ್ಧಣ್ಣ ಭೂಮಾ, ಜೈರಾಜ ಖಂಡ್ರೆ, ವಿಜಯಕುಮಾರ ಸೋನಾರೆ ಸೇರಿದಂತೆ ಹಲವರು ಇದ್ದರು. ಗೀತಾ ಪಾಟೀಲ್ ನಿರೂಪಿಸಿದರು. ಮಹಾನಂದ ದೇಶಮುಖ ವಂದಿಸಿದರು.





