ಹಿಂದಿನ ಸರ್ಕಾರದಲ್ಲಿ ಕೂಲಿ ಕಾರ್ಮಿಕರಿಗೆ ಉಚಿತ್ ಬಸ್ ಪಾಸ್ ನೀಡಲಾಗಿತ್ತು. ಅದನ್ನ ಮತ್ತೆ ಜಾರಿಗೆ ತಂದು ಬಡ ಕೂಲಿಕಾರ್ಮಿಕರಿಗೆ ಅನುಕುಲಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಸಂಘ ಒತ್ತಾಯಿಸಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು ಗ್ರೇಡ್-2 ತಹಶೀಲ್ದಾರ್ ಪ್ರಸನ್ನ ಕುಮಾರ ಮೊಘೆಕರ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಕಾರ್ಯಧ್ಯಕ್ಷ ದೇವೇಂದ್ರ ಈ ತಳವಾರ, “ಹಿಂದಿನ ಸರ್ಕಾರದಲ್ಲಿದ್ದ ಕೂಲಿಕಾರ್ಮಿಕರಿಗೆ ಉಚಿತ್ ಬಸ್ ಪಾಸ್ ನೀಡುವ ಯೋಜನೆಯನ್ನು ಮುಂದುವರಿಸಬೇಕು. ಉತ್ತರ ಕರ್ನಾಟಕದಲ್ಲಿ ಕಾರ್ಮಿಕ ಇಲಾಖೆಯ ಸವಲತ್ತುಗಳನ್ನು ಕಾರ್ಮಿಕರಿಗೆ ತಲುಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
“ಸರ್ಕಾರವು ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡುವ ಸೌಲಭ್ಯವನ್ನು ಪುನರಾರಂಭಿಸಬೇಕು. ಆ ಮೂಲಕ ಉತ್ತರ ಕರ್ನಾಟಕದ ಕಾರ್ಮಿಕರಿಗೆ ಅನೂಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಕಾರ್ಯದರ್ಶಿ ಮಲ್ಲಣ್ಣಗೌಡ ರಾಯಚೂರ ಜಮಖಂಡಿ, ಮರೆಪ್ಪ ಖಂಡಾಳಕರ್ ಗುಡೂರ, ಮೈಹೀಬುಬ್ ಕಂಬಾರ, ಚಂದ್ರಕಾಂತ್ ತಳವಾರ, ಲಗಮಣ್ಣ ಕೂಟನೂರ, ವಿರೇಶ ತಳವಾರ, ಗುರಣ್ಣ ಬಡಿಗೇರ, ಗುರು ಜೈನಾಪೂರ ಇದ್ದರು.