ಕಲಬುರಗಿ ಜಿಲ್ಲೆಯಲ್ಲಿ ಜೂನ್ ತಿಂಗಳು ವಾಡಿಕೆಯಷ್ಟು ಮಳೆಯಾಗಿಲ್ಲ. ಮುಂಗಾರು ಬಿತ್ತನೆ ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲಿ ಬರಗಾಲವೆಂದು ಘೋಷಿಸಬೇಕು, ಸಂಪೂರ್ಣ ಸಾಲ ಮನ್ನಾ ಮಾಡಬೇಕು, ದನಕರುಗಳಿಗೆ ಕಣಿಕಿ, ಗೋ ಶಾಲೆ ತೆರೆಯಬೇಕು, ಅರ್ಧಕ್ಕೆ ನಿಂತ ಮಾಶಾಸನ ಹಣ ಬಿಡುಗಡೆ ಮಾಡಬೇಕು, ಜತೆಗೆ ಮೊಡ ಬಿತ್ತನೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಕಾಳಗಿಯ ಬಿ ಆರ್ ಅಂಬೇಡ್ಕರ್ ಸರ್ಕಲ್ನಲ್ಲಿ ರಸ್ತೆ ತಡೆ ಚಳವಳಿ ನಡೆಸಲಾಯಿತು.
ಪ್ರತಿಭಟನೆ ಬಳಿಕ ಕಲಬುರಗಿ ಜಿಲ್ಲಾಧಿಕಾರಿ ಮೂಲಕ ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿ, “ಕಾಳಗಿ ತಾಲೂಕಿನಲ್ಲಿ ಜೂನ್ ತಿಂಗಳು ವಾಡಿಕೆಯಷ್ಟು ಮಳೆಯಾಗಿಲ್ಲ. ಎಲ್ ನಿನೋ ಪರಿಣಾಮ ಬರಗಾಲದ ಛಾಯೆ ಆವರಿಸಿರುವುದರಿಂದ ರೈತರು ಚಿಂತಾಜನಕರಾಗಿದ್ದಾರೆ. ಮುಂಗಾರು ಬಿತ್ತನೆಗೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಾಲ ಸೂಲ ಮಾಡಿ ಬಿತ್ತನೆಬಿಜ, ರಸಗೊಬ್ಬರ ಖರೀದಿಸಿದ್ದಾರೆ. ಕಾಳಗಿ ತಾಲೂಕಿನಲ್ಲಿ ಕೆಲವು ಹೋಬಳಿ ಮಟ್ಟದಲ್ಲಿ ಅಲ್ಪ ಸ್ವಲ್ಪ ಆಗಿರುವ ಬಿತ್ತನೆಯೂ ಕೂಡ ತೇವಾಂಶದ ಕೊರತೆಯಿಂದ ಮೊಳಕೆಯೊಡೆದಿಲ್ಲ” ಎಂದು ಕೆಪಿಆರ್ಎಸ್ ಮುಖಂಡ ಶರಣಬಸಪ್ಪ ಮಮಶೆಟ್ಟಿ ಬೇಸರ ವ್ಯಕ್ತಪಡಿಸಿದರು.
“ಹೆಸರು, ಉದ್ದು, ತೊಗರಿ, ಸೋಯಾ ಬೆಳೆಗಳು ಬಿಸಲಿನ ತಾಪಮಾನಕ್ಕೆ ಒಣಗುತ್ತಿವೆ. ಮಳೆ ಕೈಕೊಟ್ಟ ಕಾರಣ ರೈತರ ರೊಕ್ಕ(ಹಣ)ದ ಮಾಲು ಹೆಸರು, ಉದ್ದು ಬೆಳೆಗಳು ಸಂಪೂರ್ಣವಾಗಿ ಒಣಗಿವೆ. ಕೆಲವೆಡೆ ಬಿತ್ತನೆ ಕುಂಠಿತವಾಗಿದೆ. ಮುಂಗಾರು ಬೆಳೆಗಳು ರೈತರಿಗೆ ಲಾಗೋಡಿಗಾಗಿ(ಕೃಷಿ ವೆಚ್ಚ) ಆಸರೆಯಾಗುತಿತ್ತು. ಮುಂಗಾರಿನ ಮೊದಲ ಬೆಳೆಗಳಿಲ್ಲದೆ ರೈತರ ಬದುಕು ಅಧೋಗತಿಯಾಗಿದೆ. ಮುಂದೆ ರೈತ ಕುಟುಂಬ ಬದುಕು ನಡೆಸುವಂತಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ದನಕರುಗಳಿಗೆ ಕಣಿಕಿ(ಹಿಂಡಿ)ಯ ಚಿಂತೆ ಬಹಳ ಗಂಭೀರವಾಗಿದೆ. ಇದ್ದ ಬೋರ್ವೆಲ್ಗಳು ಬತ್ತುತ್ತಿವೆ. ನೀರಿನ ಪ್ರಮಾಣವೂ ನೆಲಕಚ್ಚುತ್ತಿದೆ. ತೊಗರಿ ನಾಡು ಬರುಡಾಗಿದೆ, ಮಳೆ ಇಲ್ಲದೆ ಕಬ್ಬು ಒಣಗುತ್ತಿದೆ. ಬೆಣ್ಣೆ ತೊರಾ ಅಣೆಕಟ್ಟು ಮತ್ತು ಗಂಡೋರಿ ನಾಲಾ ಯೋಜನೆ ಆಣೆಕಟ್ಟೆಗೆ ನೀರು ಬಿಡಬೇಕು” ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಜಾಗತಿಕ ತಾಣ ಅಭಿವೃದ್ಧಿ ಯೋಜನೆಯಡಿ ಕರ್ನಾಟಕದ ಹಂಪಿ, ಮೈಸೂರು, ಲಕ್ಕುಂಡಿ ನಾಮನಿರ್ದೇಶನ
“ಕಲಬುರಗಿ ಜಿಲ್ಲಾದ್ಯಂತ ಮೊಡ ಬಿತ್ತನೆ ಮಾಡಬೇಕು, ಬೆಳೆ ಕಟಾವು ವಿಮಾ ಪರಿಹಾರ ಹಣ ₹300 ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡಬೇಕು. ಕಾಳಗಿ ತಾಲೂಕು ಬರಗಾಲವೆಂದು ಘೋಷಿಸಬೇಕು” ಎಂದು ರೈತ ಸಂಘ ಕಾಳಗಿ ತಾಲೂಕು ಸಮಿತಿ ಪರವಾಗಿ ಶರಣಬಸಪ್ಪ ಮಮಶೆಟ್ಟಿ ಒತ್ತಾಯಿಸಿದರು.
ಪರಮೇಶ್ವರ, ಕಾಂತಾ, ದಿಲೀಪ್, ನಾಗೂರೆ, ತುಳುಜಪ್ಪಾ. ಮೊಘಾ, ಸಿದ್ದಪ್ಪ ಖಸೆಟ್ಟಿ, ಶಬ್ಬಿರ ಮಿಯ್ಯಾ, ದೇವಿಂದ್ರಪ್ಪ ಪಾಟೀಲ ಇದ್ದರು.





