- ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ಮಣಿಪುರದ ಘಟನೆ ಸಂವಿಧಾನ ವಿರೋಧಿ
- ಚಿಂಚೋಳಿ ತಾಲೂಕಿನ ಜ್ವಲಂತ ಸಮಸ್ಯೆಗಳು ಬಗೆಹರಿಸಲು ಜಿಲ್ಲಾಡಳಿತ ಮುಂದಾಗಬೇಕು
ಮಣಿಪೂರದಲ್ಲಿ ಕ್ರೈಸ್ತ, ಕುಕ್ಕಿ ಮತ್ತು ಬುಡಕಟ್ಟು ಸಮುದಾಯದವರ ಮೇಲೆ ಜನಾಂಗೀಯ ದ್ವೇಷದಿಂದ ಹಿಂಸಾಚಾರ ನಡೆಸಿ ಅಮಾಯಕ ಮಹಿಳೆಯರ ಮೇಲೆ ದೌರ್ಜನ್ಯವೆಸಗಿ ಬೆತ್ತಲೆ ಮೆರವಣಿಗೆ ನಡೆಸಿದ್ದು ಅಲ್ಲದೆ, ಸುಮಾರು ಚರ್ಚೆಗಳನ್ನು ಧ್ವಂಸಗೊಳಿಸಿ ಸಾವಿರಾರು ಕುಟುಂಬಗಳನ್ನು ಬೀದಿಗೆ ತಳ್ಳಿದ ಹೇಯ ಕೃತ್ಯ ಸಂವಿಧಾನದ ವಿರೋಧಿಯಾಗಿದೆ ಎಂದು ಚಿಂಚೋಳಿ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ಚಿಂಚೋಳಿ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಬಸ್ ಡಿಪೊ ಕ್ರಾಸ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಚಿಂಚೋಳಿ ತಹಸೀಲ್ದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮತ್ತು ಕಲಬುರ್ಗಿ ಜಿಲ್ಲಾಧಿಕಾರಿಗಳಿಗೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖರು “ವಿಶ್ವದಲ್ಲಿಯೇ ಶ್ರೇಷ್ಠವೆನಿಸಿಕೊಂಡ ನಮ್ಮ ಭಾರತೀಯ ಸಂವಿಧಾನವು ಸಮಸ್ತ ಭಾರತೀಯರಿಗೆ ಪ್ರಜಾಪ್ರಭುತ್ವದ ದೀಕ್ಷೆ ಕೊಟ್ಟಿದೆ. ಅಲ್ಲದೆ ವಿಶೇಷವಾಗಿ ಸರ್ವರಿಗೂ ಸಮಾನ ಪ್ರಗತಿ, ಸಮಾನ ರಕ್ಷಣೆ ನೀಡಲು ನಿರ್ದೇಶನ ನೀಡಿದೆ. ಆದರೆ ಇತ್ತಿಚೆಗೆ ಮಣಿಪೂರ ರಾಜ್ಯದಲ್ಲಿ ಕ್ರೈಸ್ತ . ಕುಕ್ಕಿ ಮತ್ತು ಬುಡಕಟ್ಟು ಜನಾಂಗದ ಮೇಲೆ ಧರ್ಮ, ಜಾತಿ ನಿಂದನೆಯ ಅಮಾನವೀಯ ದೌರ್ಜನ್ಯ ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಮಹಿಳೆಯರ, ಯುವತಿಯರನ್ನು ಬೀದಿಯಲ್ಲಿ ಬೆತ್ತಲೆ ಮೆರವಣಿಗೆ ನಡೆಸಿದ ನೀಚರಿಗೆ ಗಡಿಪಾರು ಮಾಡಬೇಕು. ಕೂಡಲೇ ಮಣಿಪೂರ ಸರ್ಕಾರ ಕಿತ್ತೊಗೆದು ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದರು.
ಚಿಂಚೋಳಿ ತಾಲೂಕಿನಲ್ಲಿ ಹಲವು ಜ್ವಲಂತ ಸಮಸ್ಯೆಗಳು ತಾಂಡವಾಡುತ್ತಿದ್ದು, ಜಿಲ್ಲಾಡಳಿತ ಕೂಡಲೇ ಸಮಸ್ಯೆಗಳು ಬಗೆಹರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಯುನಿಟಿ ಆಫ್ ಮೂಲನಿವಾಸಿ ಬಹುಜನ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾರುತಿ ಗಂಜಗಿರಿ ಚಂದ್ರಕಾಂತ ನಂದಿಕೇಶ್ವಾರ, ಮಾರುತಿ ಜಾದವ, ಶಾಮರಾವ ಪತ್ರಕರ್ತರು, ಗೋಪಾಲ ಪೂಜಾರಿ, ವಿಜಯಕುಮಾರ ಘಾಟಗೆ, ರೇವಣಸಿದ್ದಪ್ಪ ಸುಭೆದಾರ, ಮೋಹನ ಐನಾಪೂರ, ನರಸಪ್ಪ ಕೀವಡನೂರಹಾಫೀಜ್ ಸರ್ದಾರ್ತಾ, ಸಂದೀಪ್ ದೇಗಲ್ಮಡಿ, ವೀರೇಶ ಹೋಸಮನಿ, ಪ್ರದೀಪ್ ಮೇತ್ರಿ, ಸುರೇಶ್ ಬಳಂಕರ, ಮೌನೇಶ್ ಗಾರಂಪಳ್ಳಿ, ಹರ್ಷವರ್ಧನ ಚಿಮ್ಮನಕಟ್ಟಿ, ರಮೇಶ ಭಂಗೆ ಪಾಸ್ಟರ, ಸುರೇಶ್ ನಿರ್ಣಾ, ಸತೀಶ್ ಹೋಸಳ್ಳಿ
ರಾಬರ್ಟ್ ಪಾಸ್ಟರ, ಕಮಲಾಕರ ಪಾಸ್ಟರ, ಸುರೇಶ್ ಚಟ್ನಳ್ಳಿ, ಸುನೀಲ್ ಕಾರ್ಪಕಪಳ್ಳಿ, ಲಕ್ಷ್ಮಣ್ಮಾ ಶಾದಿಪೂರ, ಪ್ರಭಾಕರರೆಡ್ಡಿ ಪತ್ತೇಪೂರ, ಗಮ್ಮು ರಾಠೋಡ್ಬಾ,ಬಾಲಪ್ಪ ಮೇತ್ರಿ, ಅಶೋಕ ಬಾಬು, ಶ್ರೀಕೃಷ್ಣ ದೇಗಲ್ಮಡಿ, ಸಂವಿಧಾನ ದೇಗಲ್ಮಡಿ, ಸುಭಾಷ್ ತಾಡಪಳ್ಳಿ, ವಿಜಯಕುಮಾರ ತಾಡಪಳ್ಳಿ, ಶಿವುಕುಮಾರ ಕಟ್ಟಿಮನಿ
ಈ ಸುದ್ದಿ ಓದಿದ್ದೀರಾ? ಕಲಬುರಗಿ | 6 ವರ್ಷದ ಬಾಲಕಿ ಮೇಲೆ 75 ವರ್ಷ ವೃದ್ಧನಿಂದ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ
ಬೇಡಿಕೆಗಳು :
1. ಮಣಿಪೂರದಲ್ಲಿ ಕುಕ್ಕಿ, ಕ್ರೈಸ್ತ ಹಾಗೂ ಬುಡುಕಟ್ಟು ಸಮುದಾಯದ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಚರ್ಚಗಳನ್ನು ಧ್ವಂಸಗೊಳಿಸಿದ ಪ್ರಕರಣದಲ್ಲಿ ಭಾಗಿಯಾದ ಕಿಡಿಗೇಡಿಗಳನ್ನು ದೇಶದಿಂದ ಗಡಿಪಾರು ಮಾಡಿ ಅಲ್ಲಿನ ಕುಟುಂಬಗಳಿಗೆ ರಕ್ಷಣೆ ಒದಗಿಸಿ ಪುನರ್ವಸತಿ ಕಲ್ಪಿಸಿಕೊಡಬೇಕು.
2. ಚಿಂಚೋಳಿ ತಾಲೂಕಿನಲ್ಲಿ ಪದೇ ಪದೇ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಮರುಕಳಿಸುತ್ತಿವೆ, ಇದರಿಂದ ಪಾಲಕರಲ್ಲಿ ಭಯದ ವಾತಾವರಣ ಉಂಟಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಈ ಕುರಿತು ಜಾಗೃತಿ ಮೂಡಿಸಿ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಆತ್ಮಸ್ಥೈರ್ಯ ಹೆಚ್ಚಿಸಬೇಕು.
3. 65 ವರ್ಷ ಮೇಲ್ಪಟ್ಟ ಎಲ್ಲಾ ರೈತರಿಗೆ ಸರ್ಕಾರದ ವತಿಯಿಂದ ತಿಂಗಳಿಗೆ 10 ಸಾವಿರ ಮಾಶಾಸನ ನೀಡಬೇಕು.
4. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವರ್ಗಾವಣೆಗೊಂಡಿರುವ ಶಾಲಾ ಶಿಕ್ಷಕರನ್ನು ಬಿಡುಗಡೆ ಮಾಡದೆ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಹಿತದೃಷ್ಟಿಯಿಂದ ಮಾರ್ಚ್ ತಿಂಗಳ ಅಂತ್ಯದಲ್ಲಿ ಬಿಡುಗಡೆ ಮಾಡಬೇಕು.
5. ಚಿಂಚೋಳಿ ತಾಲೂಕಿನಲ್ಲಿ ಸುಮಾರು 60 ಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ, ಇದರಿಂದ ವಿದ್ಯಾರ್ಥಿಗಳು ಆತಂಕದಲ್ಲಿ ಕಲಿಯಬೇಕಾದ ಪರಿಸ್ಥಿತಿ ಇದೆ, ಈ ಬಗ್ಗೆ ಪರಿಶೀಲಿಸಿ ಗುಣಮಟ್ಟದ ಹೊಸ ಶಾಲಾ ಕೋಣೆಗಳು ನಿರ್ಮಿಸಬೇಕು.
6. ಯುನಿವರ್ಸಲ್ ಸೊಂಪೊ ಜನರಲ್ ಇನ್ಸೂರೆನ್ಸ್ ಕಂಪನಿಗೆ ಬೆಳೆ ವಿಮೆ ಹಣ ಪಾವತಿಸಿದ ಎಲ್ಲಾ ರೈತರಿಗೆ ಕಡ್ಡಾಯವಾಗಿ ಬೆಳೆ ವಿಮೆ ಪರಿಹಾರ ಧನ ನೀಡಬೇಕು.
7. ಅಧಿಕ ಮಳೆಯಾದರೆ ಸಾರ್ವಜನಿಕರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಗಾರಂಪಳ್ಳಿ, ತಾಜಲಪೂರ ಭಕ್ತಂಪಳ್ಳಿ, ಚಿಮ್ಮನಚೋಡ ಸೇತುವೆಗಳು ಮೇಲ್ಮಟ್ಟಕ್ಕೆ ಏರಿಸಬೇಕು.
8. ಕಲ್ಲೂರ ಗ್ರಾಮದ ಪರಿಶಿಷ್ಟ ಜಾತಿ ಬಡಾವಣೆಯ ಮಹಿಳಾ ಶೌಚಾಲಯ ಕೆಡವಿದ ಖಾಸಗಿ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಕೂಡಲೇ ಮಹಿಳಾ ಶೌಚಾಲಯ ನಿರ್ಮಿಸಬೇಕು.
9. ಚಿಂಚೋಳಿ ತಾಲೂಕಿನ ದೇಗಲ್ಮಡಿ ಗ್ರಾಮದ ಪರಿಶಿಷ್ಟ ಜಾತಿ ಬಡಾವಣೆಯ ಸತೀಷ ಕಟ್ಫಿಮನಿಯವರ ಮನೆಯಿಂದ ಹೊಸಳ್ಳಿಗೆ ಹೋಗುವ ರಸ್ತೆಯವರೆಗೆ ಚರಂಡಿ ನಿರ್ಮಿಸಬೇಕು.
10. ಚಿಂಚೋಳಿ ತಾಲೂಕಿನ ವೆಂಕಟಾಪುರ, ಧರ್ಮಸಾಗರ ,ಕಲ್ಲೂರ, ಗಡಿಕೇಶ್ವಾರ, ಚಿಮ್ಮನಚೋಡ, ನಿಡಗುಂದಾ ಪಸ್ತಪೂರ, ನಾಗಾಯಿದಲಾಯಿ ಗ್ರಾಮಗಳಿಂದ ತೆರಳುವ ಶಾಲಾ -ಕಾಲೇಜುಗಳು ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ಸೌಕರ್ಯ ಕಲ್ಪಿಸಬೇಕು.
11. ಚಂದ್ರಪಳ್ಳಿ ನೀರಾವರಿ ಯೋಜನೆಯಡಿಯಲ್ಲಿ ಬರುವ ಕಾಲುವೆಗಳು ನವೀಕರಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಯುವಂತೆ ಅನುಕೂಲ ಮಾಡಿಕೊಡಬೇಕು.
12. ಕಲಬುರ್ಗಿ ಮತ್ತು ಹುಮನಾಬಾದ್, ಚಿಟಗುಪ್ಪದಿಂದ, ಚಿಮ್ಮನಚೋಡ ಮಾರ್ಗವಾಗಿ ತಾಲೂಕು ಚಿಂಚೋಳಿಗೆ ಬರುವ ಬಸ್ ನಿಲ್ಲಿಸುವಂತೆ ಸೂಚಿಸಬೇಕು
13. ದೇಗಲ್ಮಡಿ, ಗಾರಂಪಳ್ಳಿ, ತಾಜಲಪೂರ, ಕನಕಪೂರ, ಚಿಮ್ಮನಚೋಡ, ಚಿಮ್ಮಾಇದ್ಲಾಯಿ ,ಐನಾಪೂರ ಗ್ರಾಮಗಳಲ್ಲಿ ಸಾಮೂಹಿಕ ಮಹಿಳಾ ಶೌಚಾಲಯ ನಿರ್ಮಿಸಬೇಕು.
14. ಸುಮಾರು 15-20 ವರ್ಷಗಳಿಂದ ಸುಲೇಪೇಟ ಗ್ರಾಮದಲ್ಲಿ ಅಲೆಮಾರಿ ಜನರು ವಾಸ ಮಾಡುತ್ತಿದ್ದು, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇಲ್ಲದೆ ಜೀವನ ನಡೆಸಲು ಪರದಾಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಲೆಮಾರಿಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು.
15. ಚಿಂಚೋಳಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಮತ್ತು ಅಲ್ಪಸಂಖ್ಯಾತ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕು.