ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುತ್ತಿರುವುದು ಸಮಂಜಸವಲ್ಲ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದ್ದಾರೆ.
ʼಗುತ್ತಿಗೆದಾರ ಸಚಿನ್ ಪಾಂಚಾಳ್ ಡೆತ್‌ನೋಟ್‌ನಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಪ್ರಸ್ತಾಪವಾಗಿಲ್ಲ, ಹೀಗಾಗಿ ಅವರು ಯಾವ ಕಾರಣಕ್ಕೂ ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲʼ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಪಾಂಚಾಳ್‌ಗೂ ಪ್ರಿಯಾಂಕ್ ಖರ್ಗೆ ಅವರಿಗೂ ಸಂಬಂಧವೇ ಇಲ್ಲ. ಅವರ ಆಪ್ತರೆಂದು ಹೆಸರು ಪ್ರಸ್ತಾಪಿಸುತ್ತ ಬಿಜೆಪಿ ವಿನಾಕಾರಣ ಟೀಕಿಸುತ್ತಿದೆ. ಶಾಸಕರು, ಸಚಿವರಿಗೆ ಎಲ್ಲರೂ ಆಪ್ತರೆ ಇರುತ್ತಾರೆ. ಹಾಗಂತ ಯಾವುದೋ ಪ್ರಕರಣದಲ್ಲಿ ಅವರ ಹೆಸರು ಹೇಳಿ ರಾಜೀನಾಮೆ ಕೇಳೋದು ಸಮಂಜಸವೆʼ ಎಂದು ಪ್ರಶ್ನಿಸಿದರು.
ʼಇಡೀ ಕಾಂಗ್ರೆಸ್ ಪಕ್ಷ, ಹಿಂದುಳಿದ ವರ್ಗ ಪ್ರಿಯಾಂಕ ಖರ್ಗೆ ಬೆಂಬಲಕ್ಕಿದೆ. ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುತ್ತಿರುವುದರ ಹಿಂದೆ ರಾಜಕೀಯ ಪಿತೂರಿ ಅಡಗಿದೆ. ನುಡಿದಂತೆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಜೊತೆಗೆ ಅಭಿವೃದ್ಧಿಯೂ ನಿರಂತರವಾಗಿ ಸಾಗಿದೆ. ಇದೆಲ್ಲವನ್ನು ಕಂಡು ಬಿಜೆಪಿ ಹೊಟ್ಟೆಕಿಚ್ಚು ಪಡುತ್ತಿದೆ. ಹೀಗಾಗಿ ಅವರಿಗೆ ಏನಾದರೂ ಮಾಡಿ ಗೊಂದಲ ಹುಟ್ಟು ಹಾಕಬೇಕೆಂದು ಇಂತಹ ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿಯ ಇಂತಹ ಅರ್ಥ ರಹಿತ ಆಗ್ರಹಗಳಿಗೆ ಜನಬೆಂಬಲವೂ ಇರುವುದಿಲ್ಲʼ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಹೊಸ ವರ್ಷಾಚರಣೆ : ಶುಭ ಕೋರುವ APK ಫೈಲ್ ಕ್ಲಿಕ್ಕಿಸಬೇಡಿ : ಎಸ್ಪಿ ಪ್ರದೀಪ್ ಗುಂಟಿ
ʼಸಂಬಂಧವಿಲ್ಲದ ಸಂಗತಿಗಳನ್ನೇ ಮುಂದಿಟ್ಟುಕೊಂಡು ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುತ್ತಿರುವುದರ ಹಿಂದೆ ಅವರನ್ನು ಟಾರ್ಗೆಟ್ ಮಾಡಿ ರಾಜಕೀಯ ಮಾಡುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಇದು ಜನರಿಗೂ ಗೊತ್ತಾಗಿದೆ. ಮಾತೆತ್ತಿದರೆ ಅವರಿವರ ರಾಜೀನಾಮೆ ಕೇಳಿದರೆ ಕೊಡಲಿಕ್ಕೇನು ಮಕ್ಕಳಾಟವೆ? ಬಿಜೆಪಿ ಮುಖಂಡರು ಇಂತಹ ಆಗ್ರಹ ಮಾಡುವ ಮುನ್ನ ಸರಿಯಾಗಿ ಎರಡೆರಡು ಬಾರಿ ಯೋಚಿಸಿ ಹೇಳಿಕೆ ನೀಡಬೇಕುʼ ಎಂದು ಅಜಯ್ ಸಿಂಗ್ ಕಿವಿಮಾತು ಹೇಳಿದ್ದಾರೆ.