ಗಂಡೋರಿ ನಾಲಾ ಯೋಜನೆ ಅಡಿಯಲ್ಲಿ ಮುಳುಗಡೆಯಾದ ಬೆಳಕೋಟಾ ಗ್ರಾಮದ ಪುನರ್ವಸತಿಯಲ್ಲಿನ ನಿವೇಶನಗಳ ಹಕ್ಕು ಪತ್ರ ನಕಲಿ ಮಾಡುತ್ತಿರುವ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪ್ರಜಾ ಪರಿವರ್ತನಾ ವೇದಿಕೆಯ ಕಲಬುರಗಿ ಜಿಲ್ಲಾ ಘಟಕವು ಆಗ್ರಹಿಸಿದೆ.
ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮಹಾಗಾಂವ್‌ನಲ್ಲಿರುವ ಗಂಡೋರಿ ನಾಲಾ ಯೋಜನೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕಮಲಾಪುರ ತಾಲೂಕಿನ ಗಂಡೋರಿ ನಾಲಾ ಯೋಜನೆ ಅಡಿಯಲ್ಲಿ ಮುಳುಗಡೆಯಾದ ಬೆಳಕೋಟಾ ಗ್ರಾಮದ ಪುನರ್ವಸತಿಯು ಕಮಲಾಪುರ ಹತ್ತಿರ ನೀಡಲಾಗಿದ್ದು, ಮುಳುಗಡೆಯಾದ ಬೆಳಕೋಟಾ ಗ್ರಾಮದ ನಿರಾಶ್ರಿತರಿಗೆ ಬೆಳಕೋಟಾ ಪುನರ ವಸತಿಯಲ್ಲಿ ನಿವೇಶನಗಳ ಹಕ್ಕು ಪತ್ರಗಳನ್ನು ನೀಡಲಾಗಿದೆ. ಇನ್ನೂ ಗ್ರಾಮದ ಮುಳುಗಡೆಯಾದ ನಿರಾಶ್ರಿತರಿಗೆ ಹಕ್ಕು ಪತ್ರಗಳು ನೀಡುವುದು ಬಾಕಿ ಇದೆ. ಕೆಲವು ದುಷ್ಕರ್ಮಿಗಳು ಪುನರ್ವಸತಿಯಲ್ಲಿ ಖಾಲಿ ನಿವೇಶನಗಳನ್ನು ನೋಡಿ, ನಕಲಿ ಹಕ್ಕು ಪತ್ರಗಳನ್ನು ತಯಾರಿಸಿ ಆ ಖಾಲಿ ನಿವೇಶನಗಳ ಸಂಖ್ಯೆಯನ್ನು ಹಾಕಿ ಮಾರಾಟ ಮಾಡುತ್ತಿರುವದು ಗಮನಕ್ಕೆ ಬಂದಿರುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಹೀಗಾಗಿ, ನಕಲಿ ಹಕ್ಕು ಪತ್ರಗಳನ್ನು ತಯಾರಿಸುತ್ತಿರುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ಕಮಲಾಪುರ ಪಟ್ಟಣ ಪಂಚಾಯತ್ ಪುನರ್ವಸತಿ ವಸತಿಯಲ್ಲಿನ ನಿವೇಶನಗಳ ಹಾಗೂ ಖುಲ್ಲಾ ಜಾಗದ ಮೇಲೆ ಯಾವುದೇ ರೀತಿಯ ಅಧಿಕಾರ ಚಲಾಯಿಸದ ಹಾಗೆ ಅವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರಮೇಶ್ ಬೆಳಕೋಟಾ, ಅರುಣ್ ಧಮ್ಮುರಕರ್, ಆನಂದ್ ಶಿಂಗೆ, ಅಝರುದ್ದಿನ್ ಇನ್ನಿತರರು ಉಪಸ್ಥಿತರಿದ್ದರು.
