ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಇಫ್ತಾರ್ – 2025 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಆಯಿಷಾ ವಿದ್ಯಾ ಸಂಸ್ಥೆಗಳ ಸ್ಥಾಪಕಧ್ಯಕ್ಷ ಅಮೀನ್ ಅಹ್ಸನ್ ಉಪವಾಸದ ಮಹತ್ವ ಮತ್ತು ಕುರ್‌ಆನ್ ಸಂದೇಶವನ್ನು ನೀಡಿದರು.
“ಯಾವ ರೀತಿ ಮನುಷ್ಯನಿಗೆ ಓರ್ವ ತಂದೆ-ತಾಯಿ ಇರುತ್ತಾರೆಯೋ, ಅದೇ ರೀತಿ ಈ ಲೋಕಕ್ಕೆ ಓರ್ವನೇ ದೇವನು ಮಾತ್ರ ಇರಲು ಸಾಧ್ಯ. ಆ ದೇವನನ್ನು ಅನುಸರಿಸಿ ಈ ಲೋಕದಲ್ಲಿ ಬದುಕಿ ಪರಲೋಕದಲ್ಲಿ ಮೋಕ್ಷ ಪಡೆಯಲು ಪ್ರಯತ್ನಿಸುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿದೆ” ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.
ಕಾಲೇಜಿನ ಖಜಾಂಜಿ ಹೈದರ್ ಅಲಿ ಮಾತನಾಡಿ, ಜೀವನದಲ್ಲಿ ದೇವ ಭಯವನ್ನು ಅಳವಡಿಸಲು ರಂಝಾನ್ ತಿಂಗಳ ಉಪವಾಸ ಆಚರಣೆಯಿಂದ ಹೇಗೆ ಸಾಧ್ಯವೆಂದು ವಿವರಿಸಿದರು.

ಪ್ರಾಂಶುಪಾಲೆ ಡಾ. ಹೇಮಲತಾ ಬಿ ಡಿ ಮಾತನಾಡಿ ಕಾಲೇಜಿನಲ್ಲಿ ಸತತ ಎರಡನೇ ವರ್ಷವೂ ಇಫ್ತಾರ್ ಕೂಟ ಆಯೋಜಿಸಿದ ಆಡಳಿತ ಮಂಡಳಿ ಹಾಗೂ ಸಹಕರಿಸಿದ ಎಲ್ಲ ಸಿಬ್ಬಂದಿ ವರ್ಗದವರಿಗೆ ಮತ್ತು ವಿದ್ಯಾರ್ಥಿಗಳಿಗೆ ವಂದಿಸಿ, ಪ್ರಶಂಸಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಆಡಳಿತ ಮಂಡಳಿಯ ಸಂಚಾಲಕ ಅಮಾನುಲ್ಲ ಖಾನ್ ಅಧ್ಯಕ್ಷೀಯ ಭಾಷಣ ಮಾಡಿ, “ಮನುಷ್ಯನ ಹೃದಯದ ರೋಗಗಳಿಗೆ ಕುರ್‌ಆನ್ ಅತ್ಯುತ್ತಮ ಔಷಧ” ಎಂಬ ಕುರ್‌ಆನ್‌ನ ಸೂಕ್ತದೊಂದಿಗೆ ತಮ್ಮ ಮಾತುಗಳನ್ನು ಕೊನೆಗೊಳಿಸಿದರು.

ವೇದಿಕೆಯಲ್ಲಿ ಪ್ರಗತಿಪರ ಕೃಷಿಕ ಜನಾಬ್ ಇದಿನಬ್ಬ, ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಇಮಾರತ್ ಅಲಿ, ಜೊತೆ ಕಾರ್ಯದರ್ಶಿ ಅಬ್ದುಲ್ಲಾಕುಂಞ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕುಮಾರಿ ಮುಫೀದ ಮತ್ತು ಕಾರ್ಯದರ್ಶಿ ಕುಮಾರಿ ನಬೀಸತುಲ್ ಅಫ್ನ ಇದ್ದರು. ಕುಮಾರಿ ಸುಖೈಬ ಖಿರಾಅತ್ ಪಠಿಸಿದರು, ಕುಮಾರಿ ಫಸೀಲ ಸ್ವಾಗತಿಸಿ ಕುಮಾರಿ ಶಮ್ಯ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಈ ಸುದ್ದಿ ಓದಿದ್ದೀರಾ? ಯುಗಾದಿ, ರಂಜಾನ್ ಪ್ರಯುಕ್ತ ಮೈಸೂರು-ಕಾರವಾರ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು
ಸಭಾ ಕಾರ್ಯಕ್ರಮದ ನಂತರ ಇಫ್ತಾರ್‌ನ ವ್ಯವಸ್ಥೆ ಮಾಡಲಾಗಿತ್ತು. ಮುಸ್ಸಂಜೆಯ ಪ್ರಶಾಂತವಾದ ವಾತಾವರಣದಲ್ಲಿ, ಕಾಲೇಜಿನ ಮುಂಭಾಗದಲ್ಲಿ ಶಾಂತಿಯುತವಾಗಿ ಶಿಸ್ತಿನಿಂದ ಇಫ್ತಾರ್ ಮಾಡಲಾಯಿತು. ತದನಂತರ ಮಗರಿಬ್ ನಮಾಝ್ ಹಾಗೂ ಊಟದ ವ್ಯವಸ್ಥೆ ಮಾಡಲಾಯಿತು.