ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಸಹಯೋಗದಲ್ಲಿ ಆಗಸ್ಟ್ 6ರಂದು ಬೀದರ್ ನಗರದ ಗುರುನಾನಕ್ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಮಾಧ್ಯಮ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ. ತಿಳಿಸಿದ್ದಾರೆ.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಸಮಾರಂಭ ಉದ್ಘಾಟಿಸಿ ʼಪರಿಸರ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರʼ ವಿಷಯ ಕುರಿತು ಮಾತನಾಡಲಿದ್ದಾರೆ. ಪೌರಾಡಳಿತ ಸಚಿವ ರಹೀಂ ಖಾನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಜೇವರ್ಗಿ ಶಾಸಕ ಡಾ.ಅಜಯ್ ಧರ್ಮಸಿಂಗ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಸಿಇಒ ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಅವರು ಪ್ರಾಸ್ತಾವಿಕವಾಗಿ ಮಾತನಾಡುವರು. ಹಿರಿಯ ಪತ್ರಕರ್ತ ಎಸ್.ಕುಮಾರ್ ʼನ್ಯೂಸ್ ರೂಂ ನಲ್ಲಿ ಎಐ ಮತ್ತು ನಾನುʼ ಹಾಗೂ ಮೈಸೂರು ವಿವಿ ಪ್ರಾಧ್ಯಾಪಕಿ ಸಪ್ನಾ ಎಂ.ಎಸ್ ಅವರು ʼಸುದ್ದಿಯಲ್ಲಿ ನಿಖರತೆ ಮತ್ತು ಪರಿಣಾಮಕಾರಿ ಸಂವಹನʼ ಎಂಬ ವಿಷಯಗಳ ಕುರಿತು ಗೋಷ್ಠಿ ಹಾಗೂ ಸಂವಾದ ನಡೆಸಿಕೊಡಲಿದ್ದಾರೆ.
ವಿಭಾಗ ಮಟ್ಟದ ತರಬೇತಿಯಲ್ಲಿ ನೋಂದಾಯಿಸಿಕೊಂಡಿರುವ ಅನ್ಯ ಜಿಲ್ಲೆಯಿಂದ ಆಗಮಿಸುವ ಪತ್ರಕರ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ದೂರದ ಜಿಲ್ಲೆಗಳಿಂ ಬರುವ ಪತ್ರಕರ್ತರ ಅನುಕೂಲಕ್ಕಾಗಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ನೇರವಾಗಿ ಕಾರ್ಯಕ್ರಮಕ್ಕೆ ಆಗಮಿಸುವ ಪತ್ರಕರ್ತರು ಅಂದು ಬೆಳಿಗ್ಗೆ 9:30 ಗಂಟೆಯೊಳಗಾಗಿ ಕಾರ್ಯಕ್ರಮದ ಸ್ಥಳದಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ದೂರದ ಜಿಲ್ಲೆಗಳಿಂದ ಆಗಮಿಸುವ ಪತ್ರಕರ್ತರಿಗೆ ಬೀದರ್ ನಗರದ ಗುರುದ್ವಾರದ ವಸತಿ ಸಂಕೀರ್ಣದಲ್ಲಿ ಆ.6ರಂದು ಬೆಳಿಗ್ಗೆ ಫ್ರೆಸ್ ಅಪ್ ಆಗಲು ವಸತಿ ಸೌಲಭ್ಯ ಒದಗಿಸಲಾಗುವುದು. ಅಲ್ಲಿನ ಶಿಸ್ತು, ನಿಯಮಗಳನ್ನು ಪಾಲಿಸಬೇಕು. ತರಬೇತಿಯಲ್ಲಿ ಭಾಗವಹಿಸುವ ಪತ್ರಕರ್ತರಿಗೆ ಯಾವುದೇ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ. ತರಬೇತಿ ಅಂತ್ಯದಲ್ಲಿ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ನಿರ್ಮಾಣವಾಗದ ಸ್ವಂತ ಕಟ್ಟಡ : ಯರನಳ್ಳಿ ಗ್ರಾಮ ಪಂಚಾಯಿತಿಗೆ ಆರೋಗ್ಯ ಕೇಂದ್ರವೇ ಆಸರೆ!
ಸಮನ್ವಯಕ್ಕಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧೀಕ್ಷಕ ಮುನಿರಾಜು (ಮೊ. 9480331511) ಅಥವಾ ಬೀದರ್ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಿಜಯಕೃಷ್ಣ (ಮೊ.83106 47050) ಅವರನ್ನು ಸಂಪರ್ಕಿಸಬಹುದು.