ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಆರ್ಭಟ ಜೋರಾಗಿದ್ದು, ಹಲವೆಡೆ ಅವಾಂತರಗಳು ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಕೆರೆ, ಕಟ್ಟೆ, ಹಳ್ಳಗಳು ಭರ್ತಿಯಾಗಿವೆ. ಕೆಲವೆಡೆ ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಮಳೆ ನೀರಿಗೆ ನೆನೆದು ಗೋಡೆ ಕುಸಿದು ಬಿದ್ದ ಪರಿಣಾಮ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಕೊಂಡಗುಳಿಯ ಜಗದೇವಿ ಈರಣ್ಣ ಗೌಡ (23) ಎಂಬುವರು ಸ್ಥಳದಲ್ಲೇ ಮೃತಪಟ್ಟ ಘಟನೆ ಜರುಗಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮೂಡಲಗುಂಡ ಗ್ರಾಮದ ರೈತ ಬಸವರಾಜ (30) ಎಂಬವರು ಸಿಡಿಲು ಬಡಿದು ಸಾವನಪ್ಪಿದ್ದಾರೆ. ಹೊಲದಲ್ಲಿ ಎತ್ತುಗಳನ್ನು ಮೇಯುಸುತ್ತಿದ್ದ ವೇಳೆ ಗುಡುಗು ಸಹಿತ ಮಳೆಯಾಗಿದೆ. ಬಸವರಾಜ ಅವರು ಮಳೆಯಿಂದ ರಕ್ಷಣೆ ಪಡೆಯಲು ಗಿಡದ ಕೆಳಗೆ ಆಶ್ರಯ ಪಡೆದಿದ್ದ ವೇಳೆ ಸಿಡಿದು ಬಡಿದಿದೆ. ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾದಗಿರಿ ಜಿಲ್ಲೆಯ ಕಕ್ಕೆರಾ ಗ್ರಾಮದ ಸಮೇತದ ಬೂದನೂರಿನ ಹಿರೇಹಳ್ಳದ ನೀರಿನಲ್ಲಿ ಸಾಮಯ್ಯ ಎಂಬುವರಿಗೆ ಸೇರಿದ 20ಕ್ಕೂ ಹೆಚ್ಚು ಕುರಿಗಳು ಕೊಚ್ಚಿ ಹೋಗಿವೆ.