ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೂನೂರು ಗ್ರಾಮದಲ್ಲಿರುವ ದೇವಸ್ಥಾನಗಳಿಗೆ ದಲಿತರಿಗೆ ಪ್ರವೇಶ ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮಂಜುನಾಥ್ ನೇತೃತ್ವದಲ್ಲಿ ನಡೆದ ಶಾಂತಿ ಸಭೆ ಯಶಸ್ವಿಯಾಗಿದ್ದು, ದಲಿತರು ದೇವಸ್ಥಾನ ಪ್ರವೇಶಿಸಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ.
ಕೂನೂರು ಗ್ರಾಮದಲ್ಲಿ ದಲಿತರೊಂದಿಗೆ ಊರಿನ ಮೇಲ್ವರ್ಗ ಸಮುದಾಯದವರು ಒಳ್ಳೆತ ಬಾಂಧವ್ಯ ಹೊಂದಿದ್ದಾರಾದರೂ, ದೇವಸ್ಥಾನಕ್ಕೆ ಪ್ರವೇಶ ಇರಲಿಲ್ಲ. ಬಸವೇಶ್ವರ, ಆಂಜನೇಯ, ಮಾರಮ್ಮ ಗುಡಿಗಳಿಗೆ ಪರಿಶಿಷ್ಟ ಜನರಿಗೆ ಪ್ರವೇಶ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.25ರ ಬುಧವಾರದಂದು ತಹಶೀಲ್ದಾರ್ ಮಂಜುನಾಥ್, ಸಮಾಜ ಕಲ್ಯಾಣ ಅಧಿಕಾರಿ ಜಯಪ್ರಕಾಶ್, ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣ ಲಮಾಣಿ ಮುಂದಾಳತ್ವದಲ್ಲಿ ಶಾಂತಿ ಸಭೆ ಸೇರಿ ಅರಿವು ಮೂಡಿಸಲಾಯಿತು.
ನಂತರ ಬಸವೇಶ್ವರ, ಆಂಜನೇಯ ಗುಡಿಗಳಿಗೆ ದಲಿತರೊಡನೆ ತಹಶೀಲ್ದಾರರು ಹಾಗೂ ಇನ್ನಿತರ ಅಧಿಕಾರಿಗಳು ಪ್ರವೇಶಿಸಿದ್ದಾರೆ.
ಕೂನೂರಿನಲ್ಲಿ ಪರಿಶಿಷ್ಟರಿಗೆ ಹಿಂದಿನಿಂದಲೂ ಗುಡಿಗೆ ಪ್ರವೇಶವಿರಲಿಲ್ಲ. 15 ವರ್ಷದ ಹಿಂದೆ ಜಾತ್ರೆಯ ಸಂದರ್ಭದಲ್ಲಿ ಪರಿಶಿಷ್ಟ ಜನಾಂಗದ ಹುಡುಗನೊಬ್ಬ ನೂಕುನುಗ್ಗಲಿನಿಂದ ಆಯತಪ್ಪಿ ಮೆರವಣಿಗೆಯ ದೇವರನ್ನು ಸ್ಪರ್ಶಿಸಿದ ಘಟನೆ ಗ್ರಾಮಸ್ಥರನ್ನು ಕೆರಳಿಸಿ, ದಲಿತರಿಗೆ ಸಾಮೂಹಿಕವಾಗಿ ಥಳಿಸಿದ ಘಟನೆ ನಡೆದಿತ್ತು.
ಆನಂತರ ಪ್ರತಿ ವರ್ಷದ ಜಾತ್ರೆಯಲ್ಲೂ ಸಹ ಪರಿಶಿಷ್ಟರ ಪೂಜೆಗೆ ತಡೆ ಮಾಡಿದ್ದು, ಪರಿಶಿಷ್ಟರು ತಮಗೆ ಪರಿಚಯವಿರುವ ಮೇಲ್ವರ್ಗದ ಜನಾಂಗದವರಲ್ಲಿ ಕಾಡಿ ಬೇಡಿ ಪೂಜಾ ಸಾಮಗ್ರಿಗಳನ್ನು ನೀಡಿ ಅವರಿಂದ ಪೂಜೆ ಮಾಡಿಸಿಕೊಳ್ಳಬೇಕಿತ್ತು.
ಈ ಬಗ್ಗೆ ಪ್ರತಿಭಟಿಸಿ ಎರಡು ವರ್ಷದ ಹಿಂದೆ ಗ್ರಾಮದ ದಲಿತ ಯುವಕರಾದ ಶ್ರೀನಿವಾಸಮೂರ್ತಿ, ರಾಮು, ಮಾದೇಶ್, “ನಾವೂ ಸಹ ನಿಮ್ಮಷ್ಟೇ ಹಣ ಪಾವತಿಸುತ್ತೇವೆ. ಗುಡಿ ಕಟ್ಟಲು ನಾವೂ ಹಣ ನೀಡಿದ್ದೇವೆ. ನಮಗೂ ಸಮಾನತೆಯಿದೆ. ನಮ್ಮ ಕೇರಿಗೂ ಮೆರವಣಿಗೆ ಬರಲಿ, ನಮ್ಮ ಪೂಜಾ ಸಾಮಗ್ರಿಗಳನ್ನು ಸ್ವೀಕರಿಸಿ ದೇವರ ಪೂಜೆ ಮಾಡಿ” ಎಂದು ಬೇಡಿಕೆ ಇಟ್ಟಿದ್ದರು. ಇದಕ್ಕೆ ಉತ್ತರಿಸಿದ್ದ ಗ್ರಾಮದ ಸವರ್ಣೀಯ ಮುಖಂಡರು, “ಅದು ಆಗುವುದಿಲ್ಲ. ಹಿಂದಿನಿಂದಲೂ ನಡೆದು ಬಂದ ಪದ್ದತಿಯನ್ನು ನಾವು ಬಿಡಲಾಗದು. ನಿಮ್ಮ ಪೂಜೆ ಸಾಮಗ್ರಿಗಳನ್ನು ನೀಡುವುದಾದರೆ ನಾವು ಜಾತ್ರೆಯನ್ನೇ ನಿಲ್ಲಿಸುತ್ತೇವೆ” ಎಂದು ಬಹಿಷ್ಕರಿಸಿದ್ದರು.
ಈ ಬಗ್ಗೆ ಜಿಲ್ಲಾಡಳಿತಕ್ಕೆ ದಲಿತ ಯುವಕರು ದೂರು ನೀಡಿದ್ದರು. ಅಧಿಕಾರಿಗಳಿಂದ ವರದಿ ತರಿಸಿಕೊಂಡು ದೂರಿನಲ್ಲಿ ಸತ್ಯಾಂಶವಿರುವುದನ್ನು ಮನಗಂಡು, ತಹಶೀಲ್ದಾರ್ ಅವರಿಗೆ ತೊಡಕು ಬಗೆಹರಿಸುವಂತೆ ನಿರ್ದೇಶಿಸಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಗ್ರಾಮಕ್ಕೆ ಬಂದ ತಾಲೂಕು ಆಡಳಿತಾಧಿಕಾರಿಗಳು ಎರಡು ಗಂಟೆಗೂ ಹೆಚ್ಚು ಸಭೆ ನಡೆಸಿ ದಲಿತರೊಡನೆ ಗುಡಿ ಪ್ರವೇಶಿಸಿದ್ದಾರೆ.
‘ಊರಗೌಡರು ಹೇಳಿದರೆ ಮಾತ್ರ ಮಾರಿಗುಡಿಯ ಕೀ ನೀಡುತ್ತೇನೆ’ ಎಂದ ಮಹಿಳೆ
ಮಾರಿಗುಡಿಯಲ್ಲಿ ಅಸ್ಪೃಶ್ಯತೆಯ ಕರಾಳತೆ ತಹಶೀಲ್ದಾರ್ ಮಂಜುನಾಥ್ ಅವರಿಗೂ ಬಡಿಯಿತು. ಮಹಿಳೆಯೋರ್ವರು ಊರಗೌಡರು ಹೇಳಿದರೆ ಮಾತ್ರ ಮಾರಿಗುಡಿಯ ಬೀಗದ ಕೀ ನೀಡುತ್ತೇನೆ ಎಂದು ಗುಡಿಯ ಕೀ ಕೊಡಲು ನಿರಾಕರಿಸಿದ ಘಟನೆಯೂ ಜರುಗಿತು.
ಊರಿನ ಮೇಲ್ವರ್ಗ ಸಮುದಾಯಕ್ಕೆ ಸೇರಿದ ಮುಖಂಡರು ಮಾರಿಗುಡಿಗೆ ದಲಿತರ ಪ್ರವೇಶ ನಿರಾಕರಿಸಿ ಊರು ತೊರೆದಿದ್ದರು. ಅರ್ಧ ತಾಸಿಗೂ ಹೆಚ್ಚು ಹೊತ್ತು ಕಾಯಬೇಕಾಯಿತು.
ಹತ್ತು ದಿನಗಳ ಗಡುವು ನೀಡಿದ್ದಲ್ಲದೇ, ದೇವಸ್ಥಾನಕ್ಕೆ ದಲಿತರ ಪ್ರವೇಶ ನಿರಾಕರಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ದಲಿತ ಸಂಘಟನೆಗಳ ಜೆ ಎಂ ಶಿವಲಿಂಗಯ್ಯ, ಮಲ್ಲಿಕಾರ್ಜುನ್, ಪ್ರಶಾಂತ್ ಹೊಸದುರ್ಗ, ಗುರುಮೂರ್ತಿ, ನೀಲಿ ರಮೇಶ್ ಕನಕಪುರ, ನಟರಾಜ್, ಜೀವನ್, ಮಾದೇಶ್, ಶೋಭಾ ಮೆಳೆಕೋಟೆ ಮುಂತಾದವರು ಹಾಜರಿದ್ದರು.


