ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಊರಲ್ಲೂ ಜನ ಓಡಾಡಲು ಬಸ್ಸಿಲ್ಲ. ದೊಡ್ಡ ಆಲಹಳ್ಳಿ ದಾಟಿ 20 ಕಿಮೀ ಮುಂದೆ ಹೋದರೆ ಸಿಗುವ ಊರೇ ಕಬ್ಬಾಳಯ್ಯನದೊಡ್ಡಿ. ರಾಮನಗರ-ತಮಿಳುನಾಡು ನಡುವೆ ಇರುವ ಗಡಿ ಗ್ರಾಮ. ಇಲ್ಲಿ ಜನರು ಒಂದುಕಡೆಯಿಂದ ಮತ್ತೊಂದು ಕಡೆಗೆ ಓಡಾಡಲು ಬಸ್ ವ್ಯವಸ್ಥೆಯಿಲ್ಲ ಎನ್ನುವುದು ದುರಂತದ ಸಂಗತಿ.
ಕಬ್ಬಾಳಯ್ಯನದೊಡ್ಡಿ ಊರಿಗೆ ರಸ್ತೆ ಇದ್ದರೂ ಸಾರಿಗೆ ಇಲ್ಲ. ಕಳೆದೆರಡು ತಿಂಗಳವರೆಗೆ ಬರುತ್ತಿದ್ದ ಬಸ್ ಈಗ ಬರುತ್ತಿಲ್ಲ. ಗ್ರಾಮಸ್ಥರು ಬೇರೆ ಊರಿಗೆ ಹೋಗಬೇಕೆಂದರೆ ಕಡಿದಾದ ದಾರಿಯಲ್ಲಿ 2 ಕಿಮೀ ಕ್ರಮಿಸಿ ಬನ್ನಿಮುಕ್ಕೋಡ್ಲುಗೆ ಬರಬೇಕು. ಕಾಯಿಲೆ ಬಿದ್ದ ಮಕ್ಕಳನ್ನು ಹೆಗಲ ಮೇಲೆ ಹಾಕಿಕೊಂಡು ಹೊತ್ತೊಯ್ದು ಪಕ್ಕದ ಊರಿನಲ್ಲಿ ಬಸ್ ಹಿಡಿಯಬೇಕು.
ಮೊದಲೂ ಕೂಡ ಆರು ತಿಂಗಳು ಬಸ್ ನಿಲ್ಲಿಸಿದ್ದರು. ಚುನಾವಣೆಗೆ ಮುನ್ನ ಬಸ್ ವ್ಯವಸ್ಥೆ ಆರಂಭಿಸಿದ್ದರು. ಈಗ ಮತ್ತೆ ನಿಲ್ಲಿಸಿದ್ದಾರೆ. ಪಕ್ಕದ ಊರಿನಲ್ಲಿ ಪಡಿತರ ತೆಗೆದುಕೊಂಡು ತಲೆ ಮೇಲೆಯೇ ಹೊತ್ತು ತರಬೇಕು. ಬಸ್ ಯಾಕೆ ಬರುತ್ತಿಲ್ಲವೆಂದು ಕೇಳಿದರೆ ರಸ್ತೆ ಸರಿಯಿಲ್ಲ. ಮೊದಲು ಅದನ್ನು ಸರಿ ಮಾಡಿಸಿ ಆಮೇಲೆ ಮತ್ತೆ ಬಿಡುತ್ತೇವೆಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ಹೇಳುತ್ತಾರೆ.
15 ವರ್ಷಗಳ ಹಿಂದೆ ನಮಗೆ ಮನೆ ಕಟ್ಟಲು ₹75,000 ಗ್ರ್ಯಾಂಟ್ ಕೊಡುವ ಬದಲಿಗೆ ನಮಗೆ ನೀಡಿದ್ದು, ಕೇವಲ ₹8,000 ಮಾತ್ರ. 7 ಕೊಳವೆಬಾವಿ ಕೊರೆಯಿಸಿ ಅದರಲ್ಲಿ ನೀರು ಬಂದದ್ದು ಒಂದರಲ್ಲಿ ಮಾತ್ರ. ಆದರೆ ಸಾಲ ಮಾತ್ರ ಹೇಳತೀರದಂತೆ ತಲೆ ಮೇಲೆ ಬಂತು. ನಾವು ಹೆಣ್ಣು ಮಗಳ ಮದುವೆಗೆ ಮಾಡಿದ ಸಾಲ ಸೇರಿದಂತೆ ನಮ್ಮ ಮಕ್ಕಳು ಊರು ಬಿಡುವಂತಾಯಿತು.

ರಾತ್ರಿ ಒಂದು ಇಲ್ಲೇ ತಂಗುವ(ಹಾಲ್ಟ್ ಗಾಡಿ) ಬಸ್ ಬರುತ್ತಿತ್ತು. ಬೆಳಿಗ್ಗೆ ಒಂದು ಬಸ್ ಮತ್ತು ಸಂಜೆ ಒಂದು ಬಸ್ ಬರುತ್ತಿತ್ತು. ಅದನ್ನೂ ಕೂಡ ಎರಡು ತಿಂಗಳ ಹಿಂದೆ ಕಿತ್ತುಹಾಕಿದ್ದಾರೆ. ನಾವು ಜನ ಅಲ್ವಾ ಅವರಂತೆ ಮನುಷ್ಯರಲ್ವಾ? ಓಟಿಗೆ ಮಾತ್ರ ಗೆದ್ದವರು ಬರುತ್ತಾರೆ. ನಮಗೆ ಸೌಲಭ್ಯ ಕೊಟ್ಟರೆ ತಾನೇ ನಾವು ವೋಟು ಹಾಕುವುದು.
ನಮ್ಮೂರಲ್ಲಿ ಆನೆ, ಚಿರತೆ ಕಾಟ ಇದೆ. ಹೆಂಗಸರು, ಮಕ್ಕಳು ಓಡಾಡಲು ಬಂದಾನ(ತೊಂದರೆ)ವಾಗಿದೆ. ಪಕ್ಕದ ಊರಿಗೆ ಓದಲು ಹೋಗುವ ಮಕ್ಕಳನ್ನು ಅವರ ಅಪ್ಪಂದಿರು ಹೋಗಿ ಕರೆದುಕೊಂಡು ಬರಬೇಕು. ಸುಮಾರು ಜನಕ್ಕೆ ಪಿಂಚಣಿ ಬರುತ್ತಿಲ್ಲ. ರೇಷನ್ ಸರಿಯಾಗಿ ಸಿಗುತ್ತಿಲ್ಲ. ಇದನ್ನು ಸರಿ ಮಾಡಿಸಲು ಜನಪ್ರತಿನಿಧಿಗಳು ಯಾರೂ ಕೂಡ ತಿರುಗಿ ನೋಡುತ್ತಿಲ್ಲ. ಚುನಾವಣೆ ಹೊತ್ತಿಗೆ ಮಾತ್ರ ಎಲ್ಲರೂ ಹಾಜರಾಗುತ್ತಾರೆ. ಬಡವರಿಗೆ ಸೌಲಭ್ಯ ಒದಗಿಸುವ ಕೆಲಸ ಗೆದ್ದವರದ್ದು ಅಲ್ವಾ?
ಇದನ್ನು ಓದಿದ್ದೀರಾ? ಮಂಡ್ಯ | ಕನ್ನಡ ಸಾಹಿತ್ಯ ಸಮ್ಮೇಳನ; ಮುಂದಿನ ಪೀಳಿಗೆಗೆ ಆಹಾರ ಉಳಿಸುವ ಜಾಗೃತಿ ಗೋಷ್ಠಿ ನಡೆಸುವಂತೆ ಮನವಿ
ನಾವು ಸಾಗುವಳಿ ಮಾಡುತ್ತಿದ್ದ ಗೋಮಾಳದ ಜಾಗದಿಂದ ನಮ್ಮನ್ನು ಒಕ್ಕಲೆಬ್ಬಿಸಿಬಿಟ್ಟರು. ಇಲ್ಲಿರುವ 500 ಎಕರೆ ಗೋಮಾಳದಲ್ಲಿ ನಮ್ಮೂರಿನ ಎಲ್ಲ ಕುಟುಂಬದವರಿಗೆ ತಲಾ ಎರಡು ಎಕರೆ ಜಾಗವನ್ನು ನಮ್ಮಂತೆ ಸರ್ಕಾರ ಮಾಡಿಕೊಡಲಿ. ಎಲ್ಲ ಸೌಲಭ್ಯ ಶ್ರೀಮಂತರಿಗೆ ಕೊಟ್ಟರೆ ನಮ್ಮಂತಹ ಬಡವರು ಎಲ್ಲಿಗೆ ಹೋಗಬೇಕು. ಜಮೀನು ಕೊಡುತ್ತೇವೆಂದು ಬಂದು, ಬಂದು ಬರೆದುಕೊಂಡು ಹೋದದ್ದೆ ಬಂತು, 15 ವರ್ಷದಿಂದ ಏನೂ ಮಾಡಲಿಲ್ಲ. ಈಗಲಾದರೂ ಸರ್ಕಾರ ದೊಡ್ಡಮನಸು ಮಾಡಿ ಪ್ರತಿ ಕುಟುಂಬಗಳಿಗೆ ಎರಡು ಎಕರೆ ಜಮೀನು ಮಂಜೂರು ಮಾಡಬೇಕು. ಬಸ್ ಸೌಲಭ್ಯ ಶುರು ಮಾಡಬೇಕು. ಸರಿಯಾಗಿ ಪಿಂಚಣಿ ಮತ್ತು ರೇಷನ್ ಸಿಗುವಂತೆ ವ್ಯವಸ್ಥೆ ಮಾಡಬೇಕು” ಎಂದು ಒತ್ತಾಯಿಸಿದರು.
ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರದ ವತಿಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತರ ಅಧ್ಯಯನ ಕೇಂದ್ರ ಸಮಾಜ ಸೇವಾ ವಿಭಾಗದಲ್ಲಿನ ವಿದ್ಯಾರ್ಥಿಗಳು ಬ್ಲಾಕ್ ಪ್ಲೇಸ್ಮೆಂಟ್ ಎಂದು ಮೂಲ ಆದಿವಾಸಿಗಳ ರಾಮನಗರ ಅಧ್ಯಯನ ಕೇಂದ್ರಕ್ಕೆ ಬಂದಿದ್ದಾರೆ. ಇವರ ಸೇವೆಯನ್ನು ಬಳಸಿಕೊಂಡು ಪ್ರಸ್ತುತ ರಾಮನಗರ ಜಿಲ್ಲೆಯಲ್ಲಿರುವ ಇರುಳಿಗ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಜನಸಂಖ್ಯೆಯಾಧಾರಿತ ಮಾಹಿತಿಯನ್ನು ದಾಖಲೀಕರಣ ಮಾಡುವ ಕೆಲಸ ನಡೆಯುತ್ತಿದೆ.
ಈಗಾಗಲೇ ಅಂಗನವಾಡಿಗಳ ಮೂಲಕ ರಾಮನಗರ ಜಿಲ್ಲೆಯಲ್ಲಿರುವ ಇರುಳಿಗರ ಜನಸಂಖ್ಯೆಯ ಮಾಹಿತಿಯನ್ನು ದಾಖಲಿಸಲಾಗಿದೆ. ನಿವೇಶನ, ಮನೆ, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಭೂಮಿ ಮತ್ತು ಅರಣ್ಯ ಕಾಯ್ದೆ ಮುಂತಾದ ಪ್ರಮುಖ ಮಾಹಿತಿಯನ್ನು ಒಳಗೊಂಡ ದಾಖಲಾತಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರದ ಸಂಶೋನಾಧಿಕಾರಿ ಡಾ. ಕೃಷ್ಣಮೂರ್ತಿ ಕೆ ವಿ ಕ್ಷೇತ್ರ ಪರಿವೀಕ್ಷಣೆಯ ಸಂದರ್ಭದಲ್ಲಿ ಮಾಹಿತಿ ನೀಡಿದರು.
