ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಾದ್ಯಂತ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಮಿತಿ ಮೀರಿದ್ದು, ಆರ್‌ಬಿಐನ ನಿಯಮಾವಳಿಗಳನ್ನು ಮೀರಿ ಅತಿಯಾಗಿ ಸಾಲ ನೀಡಲಾಗುತ್ತಿದೆ. ಮೈಕ್ರೋ ಫೈನಾನ್ಸ್‌ಗಳು ಹಣಕಾಸು ಪುನಶ್ಚೇತನ ಕಲ್ಪಿಸುವ ಸೇವಾ ಯೋಜನೆಯಡಿಯಲ್ಲಿ ಪರವಾನಗಿ ಪಡೆದು ಲಾಭಕೋರ ಸಂಸ್ಥೆಯಾಗಿ ಪರಿವರ್ತನೆಯಾಗಿವೆ ಎಂದು ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು.
ಕನಕಪುರ ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ, ಅಕ್ರಮ ಮೀಟರ್ ಬಡ್ಡಿ, ಫೈನಾನ್ಸ್ ದಂಧೆ ಹಾಗೂ ಪವನ್ ಬ್ರೋಕರ್ಸ್ ಮತ್ತು ಚಿನ್ನದ ಕೊಳ್ಳುವಿಕೆಯಲ್ಲಿ ತಾಲೂಕಿನ ಬಡವರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿ, “ಪರವಾನಗಿ ಇಲ್ಲದ ಹಲವು ಮೈಕ್ರೋ ಫೈನಾನ್ಸ್‌ಗಳೂ ಕೂಡಾ ಕಪ್ಪು ಹಣವನ್ನು ಬಿಳುಪಾಗಿಸುವ ಯಂತ್ರಗಳಂತೆ ಕಾರ್ಯ ನಿರ್ವಹಿಸುತ್ತಿವೆ. ಮೂಲ ಉದ್ದೇಶಗಳನ್ನು ಮರೆಮಾಚಿ ಸಾಲಗಳನ್ನು ನೀಡಿ ಸಾಲದ ಸುಳಿಗೆ ಸಿಲುಕಿಸುತ್ತಿವೆ. ಬ್ಯಾಂಕ್‌ನ ವಸೂಲಾತಿ ನಿಯಮಗಳಲ್ಲಿ ಸಾಲಗಾರನ ಗೌಪ್ಯತೆ ಕಾಪಾಡುವ ನಿರ್ದೇಶನವಿದ್ದರೂ ಮನೆಯ ಮುಂದೆ ನಿಂತು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸ ಮಾಡುವ ಸ್ಥಳಗಳಿಗೆ ಹೋಗಿ ಬೆದರಿಸುವುದು, ಇವೆಲ್ಲವೂ ಕಾನೂನು ಬಾಹಿರ ವರ್ತನೆಗಳಾಗಿವೆ. ವಸೂಲಾಗದ ಸಾಲಗಳಿಗೆ ರಿಯಾಯತಿ, ಮೋರಾಟೋರಿಯಂ, ಬಡ್ಡಿ ಮನ್ನಾಗಳಿಗೆ ಅವಕಾಶವಿದ್ದರೂ ಕೂಡ ಅಂತಹ ಸವಲತ್ತುಗಳನ್ನು ಕೊಡದೆ ವಂಚಿಸಲಾಗುತ್ತಿದೆ” ಎಂದರು.
“ಸಾಲ ವಸೂಲಿ ಸಂದರ್ಭದಲ್ಲಿ ಹಲವು ಲೈಂಗಿಕ ಕಿರುಕುಳ ಘಟನೆಗಳೂ ನಡೆದಿದ್ದು, ಮಹಿಳೆಯರ ಗೌಪ್ಯತೆಯ ದೃಷ್ಟಿಯಿಂದ ಬಹಿರಂಗಪಡಿಸುತ್ತಿಲ್ಲ. ಎಷ್ಟೋ ಬಡ ಹೆಣ್ಣುಮಕ್ಕಳು ಸಾಲ ತೀರಿಸಲಾಗದೆ ಕಲಹ ಮಾಡಿಕೊಂಡು ತವರುಮನೆ ಸೇರಿದ್ದಾರೆ. ಮತ್ತಷ್ಟು ಜನ ಮನೆ ಖಾಲಿ ಮಾಡಿಕೊಂಡು ಓಡಿ ಹೋಗಿದ್ದಾರೆ. ಸಾಲ ತೆಗೆದುಕೊಳ್ಳುವುದು ತಪ್ಪಲ್ಲ. ಆದರೆ ಸಾಲಗಾರನಿಗೆ ಸಂವಿಧಾನ ನೀಡಿರುವ ಹಕ್ಕುಗಳ ಹರಣವಾಗುತ್ತಿರುವುದು ತಪ್ಪು” ಎಂದು ಅಭಿಪ್ರಾಯಪಟ್ಟರು.
ಜೀವನ ಟ್ರಸ್ಟ್ ಅಧ್ಯಕ್ಷ ಪ್ರಶಾಂತ್ ಹೊಸದುರ್ಗ ಮಾತನಾಡಿ, “ತಾಲೂಕಿನಲ್ಲಿ ಮೀಟರ್ ಬಡ್ಡಿ ದಂಧೆ ಅತ್ಯಾಹುತವಾಗಿ ಸಾಗಿದ್ದು, ಲೈಸೆನ್ಸ್ ಇಲ್ಲದೆ 20 ರಿಂದ 30 ಪರ್ಸೆಂಟ್ ಬಡ್ಡಿಗೆ ಸಾಲ ಕೊಟ್ಟು ಚೆಕ್ ಇನ್ನಿತರ ಶ್ಯೂರಿಟಿ ಪಡೆದು ದಿನದ ಕಲೆಕ್ಷನ್ ಹೆಸರಿನಲ್ಲಿ ಹಿಂಸಿಸುತ್ತಿದ್ದಾರೆ. ಪೊಲೀಸರು ಇಂತಹ ಬಡ್ಡಿ ದಂಧೆಗಳನ್ನು ಮಟ್ಟ ಹಾಕಲಿ” ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ | ಎತ್ತಂಗಡಿ ಭೀತಿಯಲ್ಲಿ ತಮಿಳು ಕಾಲೋನಿ ನಿವಾಸಿಗಳು: ‘ಜಾಗ ಬಿಟ್ಟು ಕದಲಲ್ಲ’ ಎಂದ ಜನ
ಪವನ್ ಬ್ರೋಕರ್ಸ್‌ಗಳ ದಂಧೆಯನ್ನೂ ಪ್ರಶ್ನೆ ಮಾಡುವವರು ಇಲ್ಲದಂತಾಗಿದೆ. ಚಿನ್ನಾಭರಣಗಳ ಮೇಲೆ ಸಾಲ ನೀಡುವ ಲೈಸೆನ್ಸ್ ಪಡೆದು ಶೇ.3 ರಿಂದ ಶೇ.5ರಷ್ಟು ಬಡ್ಡಿ ಪಡೆದು ಸರ್ಕಾರಕ್ಕೂ ಸರಿಯಾದ ಲೆಕ್ಕ ತೋರಿಸದೆ ತೆರಿಗೆ ವಂಚಿಸುತ್ತಿದ್ದಾರೆ. ಹಳೆಯ ಚಿನ್ನಾಭರಣ ಕೊಳ್ಳುವ ನೆಪದಲ್ಲಿ ವೇಸ್ಟೇಜ್ ಚಾರ್ಜಸ್ ತೆಗೆದು 24 ಕ್ಯಾರೆಟ್ ಚಿನ್ನದ ಬೆಲೆ ನೀಡದೆ 22 ಕ್ಯಾರೆಟ್ ಲೆಕ್ಕ ಹಾಕಿ ಗ್ರಾಹಕರನ್ನು ವಂಚಿಸುತ್ತಿದ್ದಾರೆ. ಪ್ರಶ್ನಿಸುವ ಬಡ ಜನರ ಮೇಲೆ ಬೆದರಿಕೆ ಹಾಕುತ್ತಿದ್ದಾರೆ. ಚಿಕ್ಕಮುದುವಾಡಿಯಲ್ಲಿ ಮಹಿಳೆಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿರುವ ಪ್ರಕರಣದ ದೃಶ್ಯಾವಳಿ ಲಭ್ಯವಿದ್ದು, ಮಾರ್ವಾಡಿಗಳ ಹಾವಳಿ ಮಿತಿ ಮೀರಿದೆ. ಅವರಿಗೂ ಕಡಿವಾಣ ಹಾಕಬೇಕಿದೆ” ಎಂದರು.
ತಹಶೀಲ್ದಾರ್ ಅವರು ದೂರು ಸ್ವೀಕರಿಸಿ ಮಾತನಾಡಿ, “ದೂರನ್ನು ಪರಿಶೀಲಿಸಿ ನಗರಸಭೆ ಆಯುಕ್ತರು, ಪೊಲೀಸ್ ಇಲಾಖೆ, ಆದಾಯ ತೆರಿಗೆ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳ ಸಮಕ್ಷಮ ಸಭೆ ಕರೆದು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದರು.
ಬಹುಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನೀಲಿ ರಮೇಶ್, ಅಭಿವೃದ್ಧಿ ವೆಂಕಟೇಶ್, ದಲಿತ ಮುಖಂಡ ಗೋಪಿ, ಕನ್ನಡ ಭಾಸ್ಕರ್, ರೈತ ಸಂಘದ ಸಿದ್ದರಾಜು, ಕಿಶೋರ್, ಸ್ವಾಮಿ ಹರಿಹರ ಆರ್‌ಟಿಐ, ಶಿವಣ್ಣ , ಸಾಸಲಾಪುರ ಜಗದೀಶ್ ಹಾಜರಿದ್ದರು.