ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 1,881 ಮನೆಗಳನ್ನು ನಿರ್ಮಿಸಲು 95 ಕೋಟಿ ರೂಪಾಯಿ ಟೆಂಡರ್ ಕರೆದಿದ್ದು, ಕಾಮಗಾರಿ ಪೂರ್ಣಗೊಳಿಸಿಲ್ಲ. ಇದರ ಬಗ್ಗೆ ಇಲ್ಲಿಯ ಶಾಸಕರು ಪರಿಶೀಲನೆ ನಡೆಸಿದ್ದಾರೆಯೇ ಎಂದು ಶ್ರೀರಾಮ ಸೇನೆಯ ರಾಮನಗರ ಜಿಲ್ಲಾಧ್ಯಕ್ಷ ನಾಗಾರ್ಜುನಗೌಡ ಪ್ರಶ್ನಿಸಿದರು.
ಕನಕಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕನಕಪುರ ಕ್ಷೇತ್ರದ ಜನತೆಗೆ ಸರಿಯಾಗಿ ಸರ್ಕಾರದ ಅನುದಾನಗಳು ತಲುಪುತ್ತಿವೆಯೇ? ಎಂಬುದರ ಬಗ್ಗೆ ಇಲ್ಲಿಯ ಶಾಸಕರು ಗಮನ ಹರಿಸಬೇಕು” ಎಂದರು.
“2017-18ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 1,881 ಮನೆಗಳ ನಿರ್ಮಾಣದಲ್ಲಿ ಅಕ್ರಮ ಮತ್ತು ಸಾರ್ವಜನಿಕರಿಗೆ ಉಂಟಾಗಿರುವ ಅನಾನುಕೂಲವನ್ನು ಖಂಡಿಸಿ, ಶ್ರೀರಾಮ ಸೇನೆಯು ರಾಮನಗರ ಜಿಲ್ಲೆಯ ಕನಕಪುರ ನಗರಸಭೆ ಮುಂಭಾಗದಲ್ಲಿ ಧರಣಿ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
“ಕೋಟ್ಯಂತರ ರೂಪಾಯಿ ಟೆಂಡರಿನಲ್ಲಿ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಗೌರಿ ಇನ್ಫ್ರಾ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಕನಕಪುರದ ಬೂದಿಕೆರೆ, ಬಾಣತ ಮಾರಮ್ಮ ಬಡಾವಣೆ, ವಿವೇಕಾನಂದ ನಗರ, ಹನುಮಂತನಗರ, ಮೇಳೆಕೋಟೆ, ಅಜೀಜನಗರ, ಕುರುಪೇಟೆ, ಮಹಾರಾಜರ ಕಟ್ಟೆ ಹಾಗೂ ಮಳಗಾಳು ಮುಂತಾದ ಬಡಾವಣೆಗಳಲ್ಲಿ ಮನೆ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಆದರೆ, ಅನೇಕ ಫಲಾನುಭವಿಗಳ ಮನೆಗಳು ಇನ್ನೂ ಪೂರ್ಣಗೊಂಡಿಲ್ಲ. ಪ್ರಗತಿ ಹಂತದಲ್ಲಿಯೇ ನಿಂತುಹೋಗಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಜನರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು, ಕೆಲವರು ತಮ್ಮದೇ ವೆಚ್ಚದಲ್ಲಿ ಮನೆಗಳನ್ನು ಪೂರ್ಣಗೊಳಿಸಿದ್ದಾರೆ. ಈ ನಡೆಯನ್ನು ಖಂಡಿಸುತ್ತೇವೆ ಎಂದು ನಾಗಾರ್ಜುನಗೌಡ ಹೇಳಿದರು.
“ಹಣ ಕೊಟ್ಟ ಅನರ್ಹರಿಗೆ ಮನೆಗಳನ್ನು ಕೊಡಲಾಗಿದೆ, ಎಂಬ ಆರೋಪ ಕೇಳಿ ಬಂದಿದೆ. 2022ರಲ್ಲಿ ವಿಧಾನ ಪರಿಷತ್ ನಲ್ಲಿ ಮಂಡಿಸಿದ ಮಾಹಿತಿ ಪ್ರಕಾರ, 722 ಮನೆಗಳು ಪೂರ್ಣಗೊಂಡಿರುವುದಾಗಿ ಹೇಳಲಾಗಿತ್ತು. ಆದರೆ, ಈಗ ಸಿಕ್ಕ ಮಾಹಿತಿ ಪ್ರಕಾರ, 1336 ಮನೆಗಳು ಪೂರ್ಣಗೊಂಡಿದ್ದು, 545 ಮನೆಗಳು ಇನ್ನೂ ನಿರ್ಮಾಣ ಹಂತದಲ್ಲಿವೆ ಎಂಬ ಮಾಹಿತಿ ಸಿಕ್ಕಿದೆ” ಎಂದರು.
“ಅರ್ಧ ನಿರ್ಮಾಣಗೊಂಡ ಮನೆಗಳಲ್ಲಿ ಜನರು ಪ್ರಾಣಿಗಳಂತೆ ವಾಸಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಹೆಸರಲ್ಲಿ ನಡೆಯುತ್ತಿರುವ ಅನ್ಯಾಯ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ, ಅಕ್ರಮಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು ಹಾಗೂ ಫಲಾನುಭವಿಗಳ ಪಟ್ಟಿಯಲ್ಲಿರುವ ಜನರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು” ಎಂದು ಒತ್ತಾಯಿಸಿದರು.